ಮತಗಳ್ಳತನ: ನಾಳೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ, 6 ಸಾವಿರ ಪೊಲೀಸರಿಂದ ಬಂದೋಬಸ್ತ್!

0
Spread the love

ಬೆಂಗಳೂರು:- ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಫ್ರೀಡಂ ಪಾರ್ಕಿನಲ್ಲಿ ನಾಳೆ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.

Advertisement

ಪ್ರತಿಭಟನೆಗೆ ‘ವೋಟ್ ಅಧಿಕಾರ್ ರ್‍ಯಾಲಿ ಎಂದು ಕಾಂಗ್ರೆಸ್ ಪಕ್ಷ ಹೆಸರಿಟ್ಟಿದೆ. ಈ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯದ ಕ್ಯಾಬಿನೆಟ್ ಸಚಿವರೆಲ್ಲಾ ಭಾಗವಹಿಸುತ್ತಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ರಾಷ್ಟ್ರ ಮಟ್ಟದ ನಾಯಕರಿಂದ ಹಿಡಿದು ಗ್ರಾಮ ಪಂಚಾಯಿತಿವರೆಗಿನ ಎಲ್ಲ ನಾಯಕರು ಭಾಗವಹಿಸುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೂ ಕಾಂಗ್ರೆಸ್ ಪಕ್ಷದ ರ್‍ಯಾಲಿ ನಡೆಯಲಿದೆ.

ಬೆಂಗಳೂರು ಪೊಲೀಸರು, ಫ್ರೀಡಂ ಪಾರ್ಕ್ ಸುತ್ತಮುತ್ತಲ ಪ್ರದೇಶವನ್ನು ಭದ್ರತೆಯ ಉದ್ದೇಶದಿಂದ 15 ಸೆಕ್ಟರ್ ಗಳಾಗಿ ವಿಂಗಡಣೆ ಮಾಡಿಕೊಂಡಿದ್ದಾರೆ. ಪ್ರತಿ ಸೆಕ್ಟರ್ ಗೆ ಓರ್ವ ಡಿಸಿಪಿ ನೇತೃತ್ವದಲ್ಲಿ ಭದ್ರತೆ ನೀಡಲಾಗುತ್ತಿದೆ.

ನಾಳೆ ರಾಹುಲ್ ಗಾಂಧಿ ಕಾರ್ಯಕ್ರಮಕ್ಕಾಗಿ ಬೆಂಗಳೂರು ಪೊಲೀಸರು ತಾತ್ಕಾಲಿಕ ಕಂಟ್ರೋಲ್ ರೂಂ ತೆಗೆದು ಭದ್ರತಾ ಕಾರ್ಯ ನಿರ್ವಹಿಸುವರು. 6000 ಪೊಲೀಸರನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತಿದೆ. ಪ್ರತಿಭಟನಾನಿರತರ ನಡುವೆ 500 ಪೋಲಿಸರ ನಿಯೋಜನೆ ಮಾಡಲಾಗುತ್ತಿದೆ.

ಮಹಾರಾಣಿ ಕಾಲೇಜು ಜಂಕ್ಷನ್, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಉಪ್ಪಾರಪೇಟೆ, ಕಾಟನ್ ಪೇಟೆ, ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಡಿಸಿಪಿಗಳ ನೇತೃತ್ವದಲ್ಲಿ 15 ಸೆಕ್ಟರ್ ಗಳಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಗರುಡ ಪೋರ್ಸ್ ಮತ್ತು ಡಿ ಸ್ವಾತ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಅಂಬ್ಯುಲೆನ್ಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಕ್ವಿಕ್ ರೆಸ್ಪಾನ್ಸ್ ವೆಹಿಕಲ್, ಅಗ್ನಿಶಾಮಕ ದಳ ವಾಹನಗಳು ಸ್ಥಳದಲ್ಲಿ ಇರಲಿವೆ. 5 ವಾಯುವಜ್ರ ಬಸ್ ಸೇರಿದಂತೆ ಒಟ್ಟು 15 ಬಸ್ ಗಳನ್ನು ತುರ್ತು ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲು ಪೊಲೀಸರು ಪ್ಲ್ಯಾನ್ ಮಾಡಿದ್ದಾರೆ. ಜನರ ಆರೋಗ್ಯ ಕಾಪಾಡಲು ತುರ್ತು ಉದ್ದೇಶಗಳಿಗಾಗಿ ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here