ರಾಯಚೂರು:- ರಾಯಚೂರಿನ ಸಿರವಾರ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ಫುಡ್ ಪಾಯಿಸನ್ನಿಂದಾಗಿ ತಂದೆ, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಜರುಗಿದೆ.
38 ವರ್ಷದ ತಂದೆ ರಮೇಶ್, 8 ವರ್ಷದ ನಾಗಮ್ಮ, 6 ವರ್ಷದ ದೀಪಾ ಮೃತ ದುರ್ವೈವಿಗಳು. ತಾಯಿ ಪದ್ಮಾ, ಮಕ್ಕಳಾದ ಕೃಷ್ಣ, ಚೈತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿಗೆ ಗುಳೆ ಹೋಗಿದ್ದ ರಮೇಶ್ ಕುಟುಂಬವು 4 ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದರು. ಸೋಮವಾರ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ರಮೇಶ್ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರು.
ಬಳಿಕ ರಾತ್ರಿ ರೊಟ್ಟಿ ಚವಳೆಕಾಯಿ ಪಲ್ಯ, ಅನ್ನ, ಸಾಂಬರ್ ಊಟ ಮಾಡಿದ್ದರು. ರಾತ್ರಿ 3 ಗಂಟೆ ಸುಮಾರಿಗೆ ಕುಟುಂಬಸ್ಥರಿಗೆ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲಾಗಿತ್ತು. ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯದಲ್ಲೇ ದೀಪಾ ಕೊನೆಯುಸಿರೆಳೆದಿದ್ದಾಳೆ. ಬಳಿಕ ರಮೇಶ್ ಹಾಗೂ ನಾಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



