ರಾಯಚೂರು:- ಕುಂಭಮೇಳದಿಂದ ವಾಪಸ್ ಬರುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಯಚೂರಿನ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಮೇಹೂರ್ ಬಳಿ ಜರುಗಿದೆ.
48 ವರ್ಷದ ಮಹಾದೇವ ವಾಲೇಕರ್ ಮೃತ ವ್ಯಕ್ತಿ. ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮದ ನಿವಾಸಿಯಾಗಿದ್ದ ಮಹಾದೇವ, ತಮ್ಮ ಕುಟುಂಬ ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ತೆರಳಿದರು. ಬಳಿಕ ಅಲ್ಲಿಂದ ವಾಪಸ್ ಊರು ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಹಾದೇವ ವಾಲೇಕರ್ ಅವರು ಪ್ರಯಾಣಿಸುತ್ತಿದ್ದ ಕಾರು, ರಸ್ತೆ ಬದಿ ನಿಂತಿತ್ತು. ಕಾರಿನಲ್ಲಿದ್ದವರು ಕೆಳಗಡೆ ಇಳಿದಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಮಹಾದೇವ ಮೇಲೆ ಹೈದರಾಬಾದ್ ಮೂಲದ ಕಾರು ಹರಿದಿದೆ.
ಅಪಘಾತ ಬಳಿಕ ಮಹಾದೇವ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.



