ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ಹೋದ ಮೂವರು ಯುವಕರು ನಾಪತ್ತೆಯಾಗಿರುವ ದುರ್ಘಟನೆ ನಡೆದಿದೆ. ಹಾಸನ ಜಿಲ್ಲೆಯ ಮೂಲದ ಅಜಿತ್ (20), ಸಚಿನ್ (20) ಮತ್ತು ಪ್ರಮೋದ್ (19) ಎಂಬ ಯುವಕರೇ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
Advertisement
ಯುವಕರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಬಳಿಕ ನದಿಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ಪಡೆದ ಮಂತ್ರಾಲಯದ ಪೊಲೀಸರು ಹಾಗೂ ಸ್ಥಳೀಯ ಈಜುಗಾರರ ತಂಡ ಶೋಧ ಕಾರ್ಯಚರಣೆ ಆರಂಭಿಸಿದ್ದು, ಇದೀಗ ನದಿಯಲ್ಲಿ ಹುಡುಕಾಟ ಮುಂದುವರಿದಿದೆ. ನದಿಯ ನೀರಿನ ತೀವ್ರ ಪ್ರವಾಹ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.