ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಬಳಿ ಭತ್ತ ಹಚ್ಚುವ ಕೆಲಸ ಮುಗಿಸಿದ ಇಬ್ಬರು ಮಹಿಳೆಯರು ಕೈಕಾಲು ತೊಳೆದುಕೊಳ್ಳಲು ಹೋಗುವ ವೇಳೆ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಈರಮ್ಮ (35) ಮತ್ತು ದೇವಮ್ಮ (30) ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಲಿಂಗಸುಗೂರು ಪೊಲೀಸ್ ಮತ್ತು ಅಗ್ನಿಶಾಮಕ ದಳ ಭೇಟಿ ನೀಡಿ ಶೋಧ ಕಾರ್ಯ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ. ಸದ್ಯ ಮೃತದೇಹಗಳನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



