ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಂಗಳವಾರ ರಾತ್ರಿಯಿಡೀ ಸುರಿದ ಮಳೆ ರೈತ ಸಮುದಾಯಕ್ಕೆ ಜೀವ ಕಳೆ ತಂದಿದೆ. ಸದ್ಯ ಮುಂಗಾರಿನ ಎಲ್ಲ ಬೆಳೆಗಳು ಫಲ ಬಿಡುವ ಹಂತದಲ್ಲಿದ್ದು, ಕಳೆದ 15-20 ದಿನಗಳಿಂದ ಮಳೆಯಾಗದ್ದರಿಂದ ಬೆಳೆಗಳಿಗೆ ತೇವಾಂಶದ ಕೊರತೆ ಕಾಡುತ್ತಿತ್ತು.
ಈ ವೇಳೆ ಸುರಿದ ಸಮೃದ್ಧ ಮಳೆ ತಗ್ಗು ಪ್ರದೇಶಗಳಲ್ಲಿನ ಒಂದಷ್ಟು ಜಮೀನುಗಳಿಗೆ ಸಣ್ಣ ಪ್ರಮಾಣದಲ್ಲಿ ಹಾನಿ ಮಾಡಿತು. ಆದರೆ ಸದ್ಯ ತೆನೆ ಬಿಡುವ ಹಂತದಲ್ಲಿರುವ ಮೆಕ್ಕೆಜೋಳ, ಕಾಯಿ/ಕಾಳು ಕಟ್ಟುವ ಹಂತದಲ್ಲಿರುವ ಹೆಸರು, ಶೇಂಗಾ, ಹತ್ತಿ, ಮೆಣಸಿನಕಾಯಿ, ಈರುಳ್ಳಿ ಎಲ್ಲ ಬೆಳೆಗಳಿಗೆ ಜೀವಕಳೆ ಬಂದಂತಾಗಿದ್ದು, ರೈತರ ಖುಷಿಗೆ ಕಾರಣವಾಗಿದೆ.
ಲಕ್ಷ್ಮೇಶ್ವರ ಸೇರಿ ತಾಲೂಕಿನ ಎಲ್ಲ ಭಾಗದಲ್ಲಿ ಸುರಿದ ಮಳೆಯಿಂದಾಗಿ ಕೆರೆ-ಕಟ್ಟೆಗಳು, ಕೃಷಿ ಹೊಂಡ, ಹಳ್ಳಗಳು ತುಂಬಿ ಹರಿದಿವೆ. ತಗ್ಗು ಪ್ರದೇಶಗಳಲ್ಲಿನ ಜಮೀನುಗಳಲ್ಲಿ ನೀರು ಹರಿದು, ಸಂಗ್ರಹವಾಗಿ ಒಂದಷ್ಟು ಬೆಳೆ ಜಲಾವೃತವಾಗಿದೆ. ಮೊದಲೇ ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಗಳ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಆದರೆ ಬುಧವಾರ ಬೆಳಗಿನಿಂದಲೇ ಬಿಸಿಲ ವಾತಾವರಣದಿಂದ ಜನಜೀವನ ಎಂದಿನಂತಿತ್ತು.
ಮಂಗಳವಾರ ಸಂಜೆಯಿಂದ ಇಡೀ ರಾತ್ರಿ ಸುರಿದ ಮಳೆಯಿಂದ ಕೆಲ ಕಡೆ ಮನೆಯೊಳಗೆ ನೀರು ನುಗ್ಗಿ ಸಮಸ್ಯೆ ಎದುರಿಸುವಂತಾಗಿತ್ತು. ಪಟ್ಟಣದಲ್ಲಿ ಮಹಾದೇವಪ್ಪ ಗೊಜನೂರ, ಗುರುನಾಥ ಸೊರಟೂರ, ಗಂಗಪ್ಪ ಮುಳಗುಂದ, ಹಟೇಲಬಿ ಮೈಸೂರ, ಮನೋಹರ ಚಾವಡಿ ಸೇರಿ 6 ಮನೆಗಳು, ಹರದಗಟ್ಟಿಯಲ್ಲಿ 2 ಮನೆಗಳು ಕುಸಿದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು.