ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಳೆದ ಮೂರು-ನಾಲ್ಕು ದಿನಗಳಿಂದ ಸತತವಾಗಿ ಬಿದ್ದ ಮಳೆಗೆ ಸಮೀಪದ ಕೋಡಿಕೊಪ್ಪದ ರೈತ ದುಂಡಪ್ಪ ನಾಶಿಪುಡಿ ಕಟಾವು ಮಾಡಿದ ಶೇಂಗಾ ಬೆಳೆ ಕೊಳೆತು ಹೋಗಿದೆ. ಇದರಿಂದ ಅಲ್ಪ ಬೆಳೆಯ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಕಂಗಾಲಾಗಿದ್ದಾನೆ.
ನೀರಾವರಿ ಜಮೀನಿನಲ್ಲಿ ಸಾಕಷ್ಟು ಸಂಕಷ್ಟಗಳ ನಡುವೆಯೇ ಶೇಂಗಾ ಬೆಳೆಯನ್ನು ಬೆಳೆಯಲಾಗಿತ್ತು. ಬೆಳೆಗೆ ಪ್ರಾರಂಭದಿಂದಲೂ ಅಲ್ಲಲ್ಲಿ ಬೆಂಕಿ ಸಿಡಿ, ಬೂದಿರೋಗ ಕಾಣಿಸಿಕೊಂಡಿತ್ತು. ಔಷಧಿ ಸಿಂಪಡಿಸಿ ರೋಗ ಬಾಧೆ ನಿವಾರಿಸಿಕೊಂಡಿದ್ದು, ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹಾಕಿದ ಬಂಡವಾಳ ಬಾರದಿದ್ದರೂ ದನಕರುಗಳಿಗೆ ಶೇಂಗಾ ಹೊಟ್ಟು ಸಿಗುತ್ತದೆ ಎಂಬ ಧೈರ್ಯದಲ್ಲಿದ್ದ ರೈತನಿಗೆ ಜಮೀನಿನಲ್ಲಿ ಶೇಂಗಾದೊಂದಿಗೆ ಬಳ್ಳಿಯೂ ಕೊಳೆಯುತ್ತಿರುವುದನ್ನು ಕಂಡು ಕಂಬನಿ ಮಿಡಿಯುತ್ತಿದ್ದಾನೆ. ಒಂದೆಡೆ ಬೆಳೆ ಇಲ್ಲದೆ, ಮತ್ತೊಂದೆಡೆ ಜಾನುವಾರುಗಳಿಗೆ ಹೊಟ್ಟಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಸಾಲ ಮಾಡಿ ಕೃಷಿಗೆ ಹಣ ಸುರಿದ ರೈತರು ಕೈಹತ್ತದ ಬೆಳೆಗಳಿಂದಾಗಿ ಪರಿತಪಿಸುವಂತಾಗಿದೆ.
ಎರಡು ದಿನಗಳ ಹಿಂದೆ ಶೇಂಗಾ ಬೆಳೆಯನ್ನು ಕಟಾವು ಮಾಡಲಾಗಿತ್ತು. ಇನ್ನೇನು ಶೇಂಗಾ ಬೆಳೆಯನ್ನು ಒಂದೆಡೆ ಸಂಗ್ರಹಿಸಿ ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಮಳೆ ಸುರಿದು ಶೇಂಗಾ ಬೆಳೆಯನ್ನು ಸಂಪೂರ್ಣ ಕೊಳೆತು ಹೋಗುವಂತೆ ಮಾಡಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತನದ್ದಾಗಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಶೇಂಗಾ ಬೆಳೆ ಮಳೆಯಿಂದಾಗಿ ಕಣ್ಣ ಮುಂದೆಯೇ ಕಮರಿ ಹೋಗಿದೆ. ಜಾನುವಾರುಗಳಿಗೆ ಹೊಟ್ಟಾದರೂ ಸಿಗುತ್ತದೆ ಎಂದರೆ ಅದೂ ಇಲ್ಲವಾಗಿದೆ. ಇದರಿಂದಾಗಿ ಸಾಕಷ್ಟು ಆರ್ಥಿಕವಾಗಿ ನಷ್ಟವನ್ನು ಅನುಭವಿಸುವಂತಾಗಿದೆ. ಜಿಲ್ಲಾಡಳಿತ ಬೆಳೆ ಹಾನಿ ಪರಿಹಾರ ನೀಡಬೇಕು.
– ದುಂಡಪ್ಪ ನಾಶಿಪುಡಿ.
ರೈತ, ಕೋಡಿಕೊಪ್ಪ.