ಬೆಂಗಳೂರು: ನಗರದಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಅಲಿ ಅಸ್ಕರ್ ರಸ್ತೆಯ ಪೊಲೀಸ್ ಕಮಿಷನರ್ ಕಚೇರಿ ಹಿಂದಿನ ಗೇಟ್ ಬಳಿ ಬೆಳಗ್ಗೆ ದೊಡ್ಡ ಮರದ ಕೊಂಬೆ ಏಕಾಏಕಿ ರಸ್ತೆಗೆ ಬಿದ್ದಿದೆ.
Advertisement
ಆ ಸಮಯದಲ್ಲಿ ಅಲ್ಲಿ ಇದ್ದ ಟ್ರಾಫಿಕ್ ಪೊಲೀಸ್, ಸೆಕ್ಯೂರಿಟಿ ಗಾರ್ಡ್ ಮತ್ತು ಬಿಬಿಎಂಪಿ ಸಿಬ್ಬಂದಿ ಮೂವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.
ಈ ಘಟನೆ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿ, ಅಲಿ ಅಸ್ಕರ್ ರಸ್ತೆಯ ಬದಲಿಗೆ ಪ್ರಯಾಣಿಕರು ಇನ್‌ಫೆಂಟ್ರಿ ರಸ್ತೆ ಮಾರ್ಗವನ್ನು ಬಳಸುವಂತೆ ತಿಳಿಸಿದ್ದಾರೆ.
ಅದೇ ರೀತಿ ಆರ್.ಸಿ.ಪುರದಲ್ಲಿಯೂ ಮರ ಬಿದ್ದು ರಸ್ತೆ ಬಂದಾಗಿದೆ. ಇದರಿಂದ ರಾಮಚಂದ್ರಾಪುರ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಭೂಪಸಂದ್ರ ರಸ್ತೆ ಪರ್ಯಾಯ ಮಾರ್ಗವಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.