ಬೆಂಗಳೂರು:- ಇಂದು ನಗರದಲ್ಲಿ ಸುರಿದ ಭಾರೀ ಮಳೆಗೆ ಅವಾಂತರ ಒಂದು ನಡೆದಿದ್ದು, ಆಟೋ ಮೇಲೆ ಮರ ಬಿದ್ದು ಚಾಲಕ ಸಾವನ್ನಪ್ಪಿರುವ ಘಟನೆ ಸಿಕೆ ಅಚ್ಚುಕಟ್ಟು ಬಳಿಯ ಬಸ್ ನಿಲ್ದಾಣದಲ್ಲಿ ಜರುಗಿದೆ.
ಮಹೇಶ್ ಮೃತಪಟ್ಟ ಆಟೋ ಚಾಲಕ. ಈತ ಇಟ್ಟಮಡು ಮೂಲದವ. ಇಂದು ಸಂಜೆ 7:30ರ ಸುಮಾರಿಗೆ ಈ ಘಟನೆ ನಡೆದಿದೆ. ನಗರದ ವಿವಿಧ ಕಡೆಗಳಲ್ಲಿ ಇಂದು ಭಾರೀ ಮಳೆ, ಗಾಳಿ ಶುರುವಾಗಿತ್ತು. ಆಟೋಗೆ ಗ್ಯಾಸ್ ತುಂಬಿಸಿಕೊಂಡು ಬರುತ್ತಿದ್ದ ವೇಳೆ ಜೋರು ಗಾಳಿ ಬೀಸಿದ ಪರಿಣಾಮ ಆಟೋ ಮೇಲೆ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಚಾಲಕ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತೊಂದು ಕಾರಿನ ಮೇಲೂ ಮರ ಬಿದ್ದಿದ್ದು, ಕಾರಿನಲ್ಲಿ ಇದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.



