ಬೆಂಗಳೂರು: ತೀವ್ರ ಬಿಸಿಲಿನ ನಡುವೆಯೇ ನಾಳೆ ರಾಜ್ಯದ ಹಲವೆಡೆ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಸಿಲು–ಮಳೆಯ ಮಿಶ್ರ ವಾತಾವರಣ ಮುಂದುವರಿಯಲಿದ್ದು, ಸುಮಾರು 12 ಜಿಲ್ಲೆಗಳಲ್ಲಿ ವರುಣನ ಆಗಮನ ನಿರೀಕ್ಷಿಸಲಾಗಿದೆ. ದಕ್ಷಿಣ ಒಳನಾಡಿನ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 30-40 ಕಿಮೀ ಇರಬಹುದು ಎಂದು ಅಂದಾಜಿಸಲಾಗಿದೆ.
ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿದರೂ, ಬಳ್ಳಾರಿ, ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಅಲ್ಲಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದೆ. ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿಯೂ ಸಾಧಾರಣ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ ತಾಪಮಾನ 34-36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21-22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮುಂದಿನ ಕೆಲ ದಿನಗಳವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಮಳೆಯ ಸಾಧ್ಯತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.



