ಬೆಂಗಳೂರು:- ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಒಂದು ವಾರದಿಂದ ನಗರದಲ್ಲಿ ಕನಿಷ್ಠ ತಾಪಮಾನ ಸುಮಾರು 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಮುಂದಿನ ವಾರದ ವೇಳೆಗೆ ತಾಪಮಾನ ಸುಮಾರು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಂಜು ಮುಸುಕಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನವು ಸುಮಾರು 28 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ, ಆದರೆ ಕನಿಷ್ಠ ತಾಪಮಾನವು 16 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಬಹುದು ಎಂದು ಇಲಾಖೆ ಹೇಳಿದೆ.
ಇನ್ನು ಬೆಳಗಾವಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಶೀತಗಾಳಿ ಎಚ್ಚರಿಕೆ ನೀಡಲಾಗಿದೆ. ಬೀದರ್ ಮತ್ತು ಬೆಳಗಾವಿ ಸೇರಿದಂತೆ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನವು ಐದು ಡಿಗ್ರಿಗಳಿಗೆ ಇಳಿಯಬಹುದು. ಮುಂದಿನ ಎರಡು ದಿನಗಳಲ್ಲಿ, ಚಳಿಗಾಲ ಆರಂಭವಾಗುತ್ತಿದ್ದಂತೆ ನಗರದ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನವು 13.1 °C ಗೆ ಇಳಿಯುವ ನಿರೀಕ್ಷೆಯಿದೆ, ಇದರ ಪರಿಣಾಮವಾಗಿ ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಗಮನಾರ್ಹ ವ್ಯತ್ಯಾಸ ಉಂಟಾಗುತ್ತದೆ ಎಂದು ಹೇಳಿದೆ. ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ. ಬೆಳಗಾವಿ, ಬೀದರ್ ಸೇರಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಶೀತಗಾಳಿ ತೀವ್ರವಾಗಲಿದ್ದು, ತಾಪಮಾನ 5 ಡಿಗ್ರಿಗೆ ಇಳಿಯುವ ಸಾಧ್ಯತೆಯಿದೆ ಎಂದು ಹೇಳಿದೆ.



