ಬೆಂಗಳೂರು: ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಭಾರೀ ಮಳೆ ಆಗುತ್ತಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿ ಆಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ದಾಖಲೆಯ ಮಳೆಯಾಗಿದೆ. ಬೆಂಗಳೂರಲ್ಲಿ ಮೇ ತಿಂಗಳಲ್ಲೇ 307.9 ಮಿಮೀ ಮಳೆ ದಾಖಲೆಯಾಗಿದೆ.
ಅದೂ ಮೇ 1 ರಿಂದ ಮೇ 26 ರವರೆಗೆ ಈ ಪ್ರಮಾಣದಲ್ಲಿ ಮಳೆಯಾಗಿದೆ. 2023 ಮೇ ತಿಂಗಳಲ್ಲಿ 305.4 ಮಿಮೀ ಮಳೆ ದಾಖಲಾಗಿತ್ತು. ಇದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಈ ಬಾರಿಯ ಮಳೆ ಮುರಿದಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ಜೂನ್ 5 ಕ್ಕೆ ಮುಂಗಾರು ಆಗಮನದ ನಿರೀಕ್ಷೆ ಇತ್ತು. ಆದರೆ ಮೇ 24ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಇಂದು ಸಂಪೂರ್ಣ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. 2009 ರಲ್ಲಿ ಮೇ 23ಕ್ಕೆ ಕೇರಳ ಪ್ರವೇಶಿಸಿದ್ದ ಮುಂಗಾರು ಈ ಬಾರಿ ಮೇ 24ರಂದೇ ಪ್ರವೇಶ ಮಾಡಿದೆ. ಈ ಬಾರಿ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಸಾಧ್ಯತೆ ಇದೆ ಅವರು ಮಾಹಿತಿ ನೀಡಿದರು.