ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ 2025ರ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಬೇಕಿದ್ದ ಮಹತ್ವದ ಫೈನಲ್ ಪಂದ್ಯ ನಿಗದಿಯ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಮುಂಬೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಂದ್ಯ ಆರಂಭವಾಗದೆ ವಿಳಂಬವಾಗಿದೆ.
ಮಳೆಯ ತೀವ್ರತೆಯಿಂದ ಟಾಸ್ ಪ್ರಕ್ರಿಯೆಯನ್ನೂ ಇನ್ನೂ ನಡೆಸಲಾಗಿಲ್ಲ. ಮಧ್ಯಾಹ್ನ 3:30 ಆದರೂ ಕ್ರೀಡಾಂಗಣ ಸುತ್ತಮುತ್ತ ಮಳೆ ಮುಂದುವರಿದಿದ್ದು, ಮೈದಾನ ಸಂಪೂರ್ಣವಾಗಿ ತೇವಗೊಂಡಿದೆ. ಅಂಪೈರ್‌ಗಳು ಹಾಗೂ ಮೈದಾನ ಸಿಬ್ಬಂದಿಗಳು ಪರಿಸ್ಥಿತಿ ಸುಧಾರಿಸಲು ಶ್ರಮಿಸುತ್ತಿದ್ದಾರೆ.
ಕ್ರಿಕೆಟ್ ಪ್ರೇಮಿಗಳು ಈ ಫೈನಲ್‌ಗಾಗಿ ಆತುರದಿಂದ ಕಾಯುತ್ತಿದ್ದು, ಮಳೆಯ ಅಡ್ಡಿಯಿಂದ ನಿರಾಶರಾಗಿದ್ದಾರೆ. ಭಾರತೀಯ ತಂಡವು ಇತಿಹಾಸದಲ್ಲಿ ಮೂರು ಬಾರಿ ಫೈನಲ್‌ಗೆ ತಲುಪಿದ್ದರೂ, ಇನ್ನೂ ವಿಶ್ವಕಪ್ ಕಿರೀಟವನ್ನು ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಮಹಿಳಾ ತಂಡವು ಇದೇ ಮೊತ್ತ ಮೊದಲ ಬಾರಿಗೆ ಫೈನಲ್‌ಗೆ ಕಾಲಿಟ್ಟಿದೆ. ಹೀಗಾಗಿ ಯಾರೇ ಗೆದ್ದರೂ, ಹೊಸ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಲಿದ್ದಾರೆ.
ಐಸಿಸಿ ನಿಯಮಗಳ ಪ್ರಕಾರ, ಒಂದು ವೇಳೆ ಮಳೆ ನಿಂತು ಮೈದಾನ ಸಜ್ಜಾಗಿದ್ರೆ, ಕನಿಷ್ಠ 20 ಓವರ್‌ಗಳ ಪಂದ್ಯ ಆಡಿಸಲು ಸಾಧ್ಯ. ಆದರೆ ಮಳೆ ಮುಂದುವರಿದರೆ ಪಂದ್ಯವನ್ನು ನಾಳೆ (ನ.3) ಮೀಸಲು ದಿನಕ್ಕೆ ಮುಂದೂಡಲಾಗುತ್ತದೆ. ಮೀಸಲು ದಿನದಲ್ಲಿಯೂ ಮಳೆ ಮುಂದುವರಿದು ಪಂದ್ಯ ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಮುಂಬೈನ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂಗೆ ಬಂದು ಕುಳಿತಿದ್ದರೂ ಮಳೆ ಅವರ ಉತ್ಸಾಹವನ್ನು ತಣಿಸಿರುವುದು ಕಂಡುಬಂದಿದೆ. ಈಗ ಎಲ್ಲರ ಕಣ್ಣುಗಳು ಆಕಾಶದತ್ತ ಮಳೆ ನಿಂತು ಫೈನಲ್ ಮ್ಯಾಚ್ ಆರಂಭ ಆಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.


