ವಿಜಯಸಾಕ್ಷಿ ಸುದ್ದಿ, ಗದಗ
ಹಳ್ಳದ ಸೆಳವುನಲ್ಲಿ ಕೊಚ್ಚಿ ಹೋಗಿದ್ದ ಮತ್ತೊಬ್ಬ ಪೊಲೀಸ್ ಮಹೇಶ್ ವಕ್ರದ ಕೊನೆಗೂ ಶವವಾಗಿ ಪತ್ತೆಯಾಗಿದ್ದಾನೆ.
ಯಲಬುರ್ಗಾ ತಾಲೂಕಿನ ಸಂಗನಾಳ ಬಳಿ ಇರುವ ಸೇತುವೆ ಕೆಳಗೆ ಮಹೇಶ್ ವಕ್ರದನ ಶವ ಸಿಕ್ಕಿದೆ. ನಿನ್ನೆಯಿಂದಲೂ ಕೊಪ್ಪಳ ಜಿಲ್ಲೆಯ ಪೊಲೀಸರು, ಗದಗ ಜಿಲ್ಲೆಯ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ನಿನ್ನೆಯಿಂದ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಖುದ್ದು ಕಾರ್ಯಾಚರಣೆ ಸ್ಥಳದಲ್ಲಿಯೇ ಇದ್ದರು.
ಸೋಮವಾರ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದ ಪ್ರತಿಭಟನೆಯ ಬಂದೋಬಸ್ತ್ ಗೆ ತೆರಳಿದ್ದ ಮುಂಡರಗಿ ಠಾಣೆಯ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ್ ವಕ್ರದ ಕರ್ತವ್ಯ ಮುಗಿಸಿಕೊಂಡು ಮುಂಡರಗಿಗೆ ವಾಪಾಸು ಬರುವಾಗ ಕೊಪ್ಪಳ ಜಿಲ್ಲೆಯ ತೊಂಡಿಹಾಳ-ಬಂಡಿಹಾಳ ಗ್ರಾಮದ ಹತ್ತಿರದ ಹೊಸಹಳ್ಳದಲ್ಲಿ ಬೈಕ್ ಸಮೇತ ಇಬ್ಬರು ಕೊಚ್ಚಿಹೋಗಿದ್ದರು.
ಮೃತಪಟ್ಟ ಇಬ್ಬರೂ ಪೇದೆಗಳು 2016ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಜೊತೆಯಾಗಿಯೇ ಇಹಲೋಕ ತ್ಯಜಿಸಿದ್ದು ದೊಡ್ಡ ದುರಂತ. ಇದೆಂಥಾ ವಿಧಿಲಿಖಿತ?
ಇದನ್ನೂ ಓದಿ ನಾಪತ್ತೆಯಾಗಿದ್ದ ಇಬ್ಬರು ಪೊಲೀಸರಲ್ಲಿ ಒಬ್ಬನ ಶವ ಪತ್ತೆ, ಮತ್ತೋರ್ವ ಪೊಲೀಸನಿಗಾಗಿ ಮುಂದುವರಿದ ಶೋಧ
ಈ ಮೂಲಕ ಕೇವಲ ಏಳು ವರ್ಷಗಳಲ್ಲಿಯೇ ಇಬ್ಬರು ಸರಕಾರಿ ಸೇವೆ ಮುಗಿಸಿದಂತಾಗಿದೆ. ತೀರಾ ಬಡತನದಲ್ಲಿ ಹುಟ್ಟಿ ಬೆಳದಿದ್ದ ಇಬ್ಬರು ಇಲಾಖೆಯಲ್ಲಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದರು.
ಇದನ್ನೂ ಓದಿ ಭಾರೀ ಮಳೆ ಹಿನ್ನೆಲೆ; ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ಮುಂಡರಗಿ ಠಾಣಾ ಪೊಲೀಸರು ನಾಪತ್ತೆ?
ಮೃತ ಇಬ್ಬರೂ ಮುಂಡರಗಿ ತಾಲೂಕಿನ ನಿವಾಸಿಗಳು ಎಂಬುದು ಗಮನಾರ್ಹ. ನಿಂಗಪ್ಪ ಹಲವಾಗಲಿ ನಾಗರಹಳ್ಳಿ ಗ್ರಾಮದ ನಿವಾಸಿಯಾಗಿದ್ದರೇ, ಮಹೇಶ್ ವಕ್ರದ ಹಮ್ಮಗಿ ಗ್ರಾಮದವನು.
ಮೃತರ ಕುಟುಂಬಸ್ಥರ ಆಕ್ರಂಧನಮುಗಿಲ ಮುಟ್ಟಿದ್ದು, ಹರೆಯದ ಮಕ್ಕಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಪರಿಹಾರಕ್ಕೆ ಒತ್ತಾಯ
ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ್ ವಕ್ರದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಯುವ ಕಾಂಗ್ರೆಸ್‌ನ ರಾಜ್ಯ ವಕ್ತಾರ ದುದುಪೀರ ಹಣಗಿ, ಎರಡೂ ಕುಟುಂಬಗಳು, ತಮ್ಮ ಮಕ್ಕಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸರಕಾರ ಪ್ರತಿ ಕುಟುಂಬಕ್ಕೆ 50ಲಕ್ಷದಂತೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದು, ಆ ಮೂಲಕ ಮೃತ ಪೇದೆಗಳ ಕುಟುಂಬಗಳಿಗೆ ಸರಕಾರ ಧೈರ್ಯ ತುಂಬಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.