ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಮುಂಗಾರು ಹಾಗೂ ಹಿಂಗಾರಿನ ನಿರಂತರ ಮಳೆಗೆ ಮೆಕ್ಕೆಜೋಳ ಬೆಳೆದ ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ. ತೇವಾಂಶ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದ್ದು, ಕೈಗೆ ಬಂದ ಅಲ್ಪಸ್ವಲ್ಪ ಫಸಲಿಗೂ ಉತ್ತಮ ದರ ಸಿಗುತ್ತಿಲ್ಲ. ಅತಿಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗದೇ ಆತಂಕಗೊಂಡಿದ್ದಾರೆ.
ಕಳೆದ ತಿಂಗಳಷ್ಟೇ ಮೆಕ್ಕೆಜೋಳದ ಬೆಲೆ ಕ್ವಿಂಟಲ್‌ಗೆ 2400 ರೂ ಇತ್ತು. ಸದ್ಯ ಮಾರುಕಟ್ಟೆಯಲ್ಲಿ 1600 ರೂ ಇದೆ. ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ 2600-2800 ರೂ ದರವಿತ್ತು. ಒಂದು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲು ಸುಮಾರು 20ರಿಂದ 30 ಸಾವಿರ ರೂ ವೆಚ್ಚವಾಗುತ್ತದೆ. ಇದರಲ್ಲಿ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಕೂಲಿ ಕಾರ್ಮಿಕರ ವೇತನ ಮತ್ತು ಕಾಳು ತೆಗೆಯುವ ವೆಚ್ಚ ಸೇರುತ್ತದೆ. ಆದರೆ ಪ್ರಸ್ತುತ ದರ ಕುಸಿತದಿಂದ ರೈತರು ಶ್ರಮಕ್ಕೆ ತಕ್ಕಂತೆ ಯೋಗ್ಯ ಪ್ರತಿಫಲ ಪಡೆಯದೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರತಿ ಬಾರಿ ರೈತರ ಫಸಲು ಮಾರುಕಟ್ಟೆಗೆ ಬರುತ್ತಿದ್ದಂತೆ ಖರೀದಿದಾರರು ದಿಢೀರ್ ಬೆಲೆ ಕಡಿಮೆ ಮಾಡುತ್ತಾರೆ. ಸಾಲ-ಸೋಲು ಮಾಡಿ ಬಿತ್ತನೆ ಮಾಡಿರುವ ರೈತರು ಸಾಲ ತೀರಿಸಿದರೆ ಸಾಕು ಎಂಬ ಹತಾಶೆಯಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುವುದು ವಾಡಿಕೆಯಾಗಿದೆ. ಸರ್ಕಾರ ತಕ್ಷಣ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ತೆರೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಆಗ್ರಹಿಸಿದ್ದಾರೆ.



