ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮಳೆರಾಯ ರಾತ್ರಿ ಇಡೀ ಆರ್ಭಟಿಸಿದ್ದಾನೆ. ನಗರದ ಅಷ್ಟ ದಿಕ್ಕುಗಳಲ್ಲೂ ಮಳೆಯಾಗಿದ್ದು, ವಾರದ ಮೊದಲ ದಿನವೇ ಸಿಟಿ ಮಂದಿಗೆ ಕಿರಿಕಿರಿ ಉಂಟಾಗಿದೆ. ಪರಿಣಾಮ ಅಪಾರ್ಟ್ಮೆಂಟ್ ಬೇಸ್ಮೆಂಟ್ ಹಾಗೂ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಿಂದ ನೀರು ಹೊರಹಾಕಲು ಜನರು ಪರದಾಡುವಂತಾಯಿತು.
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನಿಮ್ಮಲ್ಲಿ ಒಬ್ಬ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಳೆಯ ಅವಾಂತರದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಉಂಟಾದ ಹಾನಿಯಿಂದ ತೀವ್ರ ಕಳವಳಗೊಂಡಿದ್ದೇನೆ.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಸವಾಲುಗಳನ್ನು ಎದುರಿಸಲು ಮತ್ತು ಪರಿಹಾರವನ್ನು ಕೈಗೊಳ್ಳುವ ದಿನದ 24 ಗಂಟೆಗಳೂ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಾನು ಬಿಬಿಎಂಪಿ ವಾರ್ ರೂಮ್ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ವಾಸ್ತವಿಕವಾಗಿ ಮಾಹಿತಿ ಪಡೆಯುತ್ತೇನೆ. ಇವತ್ತು ನಾವು ಎದುರಿಸುತ್ತಿರುವ ಸಮಸ್ಯೆಗಳು ಹೊಸದೇನಲ್ಲ. ಹಲವು ಸರ್ಕಾರಗಳ, ಹಲವು ವರ್ಷಗಳ ನಿರ್ಲಕ್ಷತನ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇನೆ. ತಾತ್ಕಾಲಿಕ ಪರಿಹಾರ ಅಲ್ಲ, ದೀರ್ಘಕಾಲಿಕ ಪರಿಹಾರ ಕೈಗೊಳ್ಳು ಕೆಲಸ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
ನನ್ನೆಲ್ಲಾ ಬೆಂಗಳೂರಿಗರೇ, ನಾನು ನಿಮ್ಮಲ್ಲಿ ಒಬ್ಬ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ನಿಮ್ಮ ಕಳವಳ ಅರ್ಥಮಾಡಿಕೊಳ್ತೇನೆ. ಹತಾಶೆಯನ್ನು ಹಂಚಿಕೊಳ್ಳುತ್ತೇನೆ. ಬೆಂಗಳೂರಿನ ಈ ಸಮಸ್ಯೆಯನ್ನು ಪರಿಹರಿಸಲು ನಾನು ಬದ್ಧನಾಗಿದ್ದು, ಈ ಬಗ್ಗೆ ನಾನು ಭರವಸೆ ನೀಡುತ್ತೇನೆ. ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದಿದ್ದಾರೆ.