ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಡೆಂಗ್ಯೂ, ಚುಕ್ಯುನ್ ಗುನ್ಯಾ ರೋಗಗಳ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಬೇಕು. ಗದಗ ಜಿಲ್ಲೆಯು ಕೂಡ ಕೆಎಫ್‌ಡಿ ಬಾಧಿತ ಎಂಡಮಿಕ್ ಜಿಲ್ಲೆಗಳಲ್ಲಿ ಒಂದಾಗಿದ್ದು, ಕೆಎಫ್‌ಡಿ ವೈರಸ್‌ನಿಂದ ಸೋಂಕಿತ ಉಣ್ಣೆಯು ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದೆ. ಈ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಬಾರದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿರುತ್ತದೆ.
ಜಿಲ್ಲೆಯಿಂದ ಈಗಾಗಲೇ 76 ರಕ್ತದ ಮಾದರಿಗಳನ್ನು ಹಾಗೂ 26 ಟಿಕ್‌ಪೂಲ್ ಮಾದರಿಗಳನ್ನು ಕೆಎಫ್‌ಡಿ ವೈರಸ್ ಪತ್ತೆಗಾಗಿ ವಿಡಿಎಲ್ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲ ರಕ್ತದ ಮಾದರಿಗಳು ಹಾಗೂ ಟಿಕ್‌ಪೂಲ್ ಮಾದರಿಗಳ ಫಲಿತಾಂಶ ನೆಗೆಟಿವ್ ಎಂದು ವರದಿಯಾಗಿವೆ. ನವೆಂಬರ್ ತಿಂಗಳಿನಿಂದ ಜೂನ್ ತಿಂಗಳವರೆಗೂ ರೋಗ ಪ್ರಸರಣವಾಗುವ ಸಮಯವಿರುವುದರಿಂದ ತಾಲೂಕಾ ಮಟ್ಟದಲ್ಲಿ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಕೆಎಫ್‌ಡಿ ಕುರಿತು ಸಭೆ ನಡೆಸಬೇಕು ಎಂದರು.
ಜಿಲ್ಲಾ ಸಮೀಕ್ಷಣಾಧಿಕಾರಿ ವೆಂಕಟೇಶ ರಾಠೋಡ ಮಾತನಾಡಿ, ಜಿಲ್ಲೆಯಲ್ಲಿ ಜನೆವರಿ 2025ರಿಂದ ಜುಲೈ 2025ರವೆಗೆ ಒಟ್ಟು 2499 ಕರುಳು ಬೇನೆ ಪ್ರಕರಣಗಳು, 2064 ಟೈಫೈಡ್ ಪ್ರಕರಣಗಳು, 22 ಹೆಪಟೈಟೀಸ್-ಎ, 61 ಡೆಂಗೀ ಪ್ರಕರಣಗಳು ವರದಿಯಾಗಿವೆ. ಜನೆವರಿ 2025ರಿಂದ ಜುಲೈ 2025ರವರೆಗೆ ಒಟ್ಟು 206679 ಸಂಶಯಾಸ್ಪದ ಮಲೇರಿಯಾ ರಕ್ತದ ಲೇಪನಗಳನ್ನು ಸಂಗ್ರಹಿಸಿದ್ದು, ಅದರಲ್ಲಿ 3 ಖಚಿತ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 5988 ನಾಯಿ ಕಡಿತ ಹಾಗೂ 926 ಇತರೇ ಪ್ರಾಣಿಗಳ ಕಡಿತ ವರದಿಯಾಗಿವೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಶಸ್ತç ಚಿಕಿತ್ಸಕ ಡಾ. ಕರಿಗೌಡ್ರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ವೈ.ಕೆ. ಭಜಂತ್ರಿ, ಡಾ. ರಾಜೇಂದ್ರ ಬಸರಿಗಿಡದ, ಡಾ. ಅರುಂಧತಿ ಕುಲಕರ್ಣಿ ಸೇರಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಇಲ್ಲಿಯವರೆಗೂ ಗದಗ ಜಿಲ್ಲೆಯಿಂದ 2025ರಲ್ಲಿ ಒಟ್ಟು 351 ಉಪ್ಪಿನ ಮಾದರಿಗಳು ಹಾಗೂ 176 ಮೂತ್ರದ ಮಾದರಿಗಳನ್ನು ಅಯೋಡಿನ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲ ಮೂತ್ರದ ಮಾದರಿಗಳು ಸಹಜ ಎಂದು ವರದಿಯಾಗಿವೆ. ಅದರಲ್ಲಿ 3 ಉಪ್ಪಿನ ಮಾದರಿಗಳು < 15ಪಿಪಿಎಂ ಎಂದು ವರದಿಯಾಗಿವೆ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ವೆಂಕಟೇಶ ರಾಠೋಡ ಸಭೆಗೆ ವಿವರಿಸಿದರು.