ವಿಜಯಸಾಕ್ಷಿ ಸುದ್ದಿ, ಧಾರವಾಡ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದರ ಬಗ್ಗೆ ಅರಿವು, ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಕುಡಿಯುವ ನೀರು, ಜಾನುವಾರು ಮೇವು, ನರೇಗಾ ಉದ್ಯೋಗ ನೀಡುತ್ತಿರುವ ಬಗ್ಗೆ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಪ್ರಸ್ತುತ ದಿನದವರೆಗೆ ಜಿಲ್ಲೆಯ 37 ಗ್ರಾಮಗಳಿಗೆ 58 ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೋರವೆಲ್, ಪೈಪ್‌ಲೈನ್, ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆಯಲು ಒಪ್ಪಂದವೂ ಆಗಿದೆ. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ, ಅಪವ್ಯಯ, ಸೋರಿಕೆ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ನವಿಲುತೀರ್ಥ ಜಲಾಶಯದಿಂದ ಎಂ.ಆರ್.ಬಿ.ಸಿ ಕಾಲುವೆ ಮುಖಾಂತರ ಜಿಲ್ಲೆಯ ನವಲಗುಂದ -37, ಅಣ್ಣಿಗೇರಿ-13, ಹುಬ್ಬಳ್ಳಿ-07 ಮತ್ತು ಕುಂದಗೋಳ-೦೧ ಸೇರಿ ಒಟ್ಟು 58 ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗಿದ್ದು, ಮೇ ತಿಂಗಳ ಅಂತ್ಯದವರೆಗೆ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುಶಃ ಉಂಟಾಗುವುದಿಲ್ಲ. ಕೆರೆಗಳ ನೀರಿನ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಮೇವು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ 7 ಸ್ಥಳಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದ್ದು, ರೈತರು ಮೇವು ಪಡೆದುಕೊಳ್ಳುತ್ತಿದ್ದಾರೆ. ಮೇ ತಿಂಗಳನ್ನು ಗಮನದಲ್ಲಿಟ್ಟುಕೊಂಡು ರೈತರಿಂದ ಮೇವು ಬೇಡಿಕೆ ಅಂದಾಜಿಸಿ, ಈಗಲೇ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಿ. ರೈತರು, ಪಶುಪಾಲಕರಿಗೆ ಹೆಚ್ಚು ತಾಪಮಾನ ಇರುವ ಈ ಸಂದರ್ಭದಲ್ಲಿ ಜಾನುವಾರು ಪಾಲನೆ ಮತ್ತು ಸುರಕ್ಷತೆ ಬಗ್ಗೆ ತಿಳುವಳಿಕೆ ನೀಡಿ ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಅವರು ಸೂಚಿಸಿದರು.
ಧಾರವಾಡ ಜಿಲ್ಲಾಡಳಿತದಿಂದ ಜೂನ್ ತಿಂಗಳವರೆಗೆ ಬರಬಹುದಾದ ಕುಡಿಯುವ ನೀರಿನ ಸಮಸ್ಯೆ, ಜಾನುವಾರು ಮೇವು ಕೊರತೆ ಅಂದಾಜಿಸಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರಿಗೆ, ಸಾರ್ವಜನಿಕರಿಗೆ ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಲು ಜಿಲ್ಲಾಧಿಕಾರಿಗಳ ಕಚೇರಿ, ತಹಸೀಲ್ದಾರ ಕಚೇರಿ ಮತ್ತು ತಾ.ಪಂಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಈ ಎಲ್ಲಾ ಮಾಹಿತಿ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ತಲುಪಬೇಕು ಎಂದರು.
ತಹಸೀಲ್ದಾರರು ಮತ್ತು ಪಶುಪಾಲನೆ ಅಧಿಕಾರಿಗಳು ಪ್ರತಿ ಜಾನುವಾರು ಮಾರುಕಟ್ಟೆಯಲ್ಲಿ ಅಭಿಯಾನ ಕುರಿತು ಹೆಚ್ಚು ಪ್ರಚಾರ ಮಾಡಬೇಕು. ಮಾರುಕಟ್ಟೆಗೆ ಬಂದಿರುವ ರೈತರನ್ನು ಮಾತನಾಡಿಸಿ, ಅವರಿಗೆ ಮಾಹಿತಿ ನೀಡಬೇಕು. ಧ್ವನಿವರ್ಧಕ ಬಳಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ತಮ್ಮ ತಾಲೂಕಿನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಶುಪಾಲನೆ ಇಲಾಖೆಯ ನಿರ್ದೇಶಕ ಡಾ. ರವಿ ನಿಲಿಗೌಡರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಭೂದಾಖಲೆಗಳ ಉಪನಿರ್ದೇಶಕ ಮೋಹನ ಶಿವಣ್ಣವರ ಸೇರಿದಂತೆ ಎಲ್ಲಾ ತಾಲೂಕುಗಳ ತಹಸೀಲ್ದಾರರು, ತಾ.ಪಂ ಇ.ಓಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ವಿಫಲ ಕೊಳವೆ ಬಾವಿ ಮುಚ್ಚಿಸಿ
ಪ್ರತಿ ತಿಂಗಳು ಪಂಚಾಯತರಾಜ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ತಮ್ಮ ವ್ಯಾಪ್ತಿಯ ಸಫಲ ಮತ್ತು ವಿಫಲ ಕೊಳವೆ ಬಾವಿಗಳ ಸಮೀಕ್ಷೆ ಮಾಡಿ ವರದಿ ನೀಡಲು ತಿಳಿಸಲಾಗಿದೆ. ಅದರಂತೆ ಈಗ ಬೇಸಿಗೆ ಕಾಲವಾಗಿರುವುದರಿಂದ ರೈತರು ಕೃಷಿ, ಕುಡಿಯುವ ನೀರಿಗಾಗಿ ಹೆಚ್ಚು ಹೆಚ್ಚು ಕೊಳವೆ ಬಾವಿ ತೋಡಿಸುತ್ತಾರೆ. ಅದರಲ್ಲಿ ನೀರು ಬಂದರೆ ಮೋಟಾರು ಇಳಿಸಿ ಬಳಕೆ ಮಾಡುತ್ತಾರೆ. ನೀರು ಬರದಿದ್ದಲ್ಲಿ ಹಾಗೆಯೇ ಬಿಟ್ಟು ಬಿಡುತ್ತಾರೆ. ಇದರಿಂದ ಮಕ್ಕಳ ಜೀವಕ್ಕೆ ಅಪಾಯದ ಸಾಧ್ಯತೆಯಿರುತ್ತದೆ. ವಿಫಲ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚಿಸುವುದು ತಹಸೀಲ್ದಾರ್ ಹಾಗೂ ತಾ.ಪಂ ಇ.ಓಗಳ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.