ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಮಾರ್ಚ್ 3ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಲಸಿಕೆ ಹಾಕಲಾಗುವುದು ಹಾಗೂ ಮಾರ್ಚ್ 4ರಿಂದ 6ರವರೆಗೆ ಮೂರು ದಿನಗಳ ಕಾಲ ಮನೆ-ಮನೆಗೆ ಭೇಟಿ ನೀಡಿ ಪೋಲಿಯೋ ಲಸಿಕೆ ಹಾಕಲಾಗುತ್ತಿದ್ದು, ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ಜರುಗಿದ `ರಾಷ್ಟ್ರೀಯ ಪಲ್ಸ್ ಪೋಲಿಯೋ’ ಅನುಷ್ಠಾನ ಕುರಿತ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಪ್ರಭಾತ್ಪೇರಿ ಕೈಗೊಳ್ಳಬೇಕು. ಪಲ್ಸ್ ಪೋಲಿಯೋ ಬೂತ್ಗಳಿಗಳಿರುವ ಅಂಗನವಾಡಿ ಕೇಂದ್ರಗಳನ್ನು ಪೋಲಿಯೋ ಬ್ಯಾನರ್ಗಳಿಂದ ಸಿಂಗರಿಸಿ ಪಲ್ಸ್ ಪೋಲಿಯೋ 4 ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕಟ್ಟಡ ನಿರ್ಮಾಣಕ್ಕೆ ಬಂದ ಕಾರ್ಮಿಕರಿಗೆ ಪೋಲಿಯೋ ಕಾರ್ಯಕ್ರಮದ ಜಾಗೃತಿ ಮೂಡಿಸಬೇಕು ಎಂದರಲ್ಲದೆ, ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಅವಶ್ಯವಿರುವ ಐಸ್ಪ್ಯಾಕ್ ತಯಾರಿಸಲು ಮೂರು ದಿನಗಳ ಮೊದಲು ನಿರಂತರ ವಿದ್ಯುತ್ ಸರಬರಾಜು ಇರುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಕೆ.ಎಸ್ ಮಾತನಾಡಿ, ಪಲ್ಸ ಪೋಲಿಯೋ ಕಾರ್ಯಕ್ರಮದ ಈ ಸುತ್ತಿನಲ್ಲಿ 129327 ಮಕ್ಕಳಿಗೆ ಲಸಿಕೆ ಗುರಿ ಹೊಂದಲಾಗಿದೆ. ಮಾರ್ಚ್ 3ರಂದು ಬೂತ್ ಮಟ್ಟದಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಮಾರ್ಚ್ 4ರಿಂದ 6ರವರೆಗೆ ಮೂರು ದಿನಗಳವರೆಗೆ ಲಸಿಕಾ ತಂಡದವರು ಮನೆ-ಮನೆಗೆ ಭೇಟಿ ನೀಡಿ ಲಸಿಕಾ ಕೇಂದ್ರಕ್ಕೆ ಬರದೇ ಉಳಿದ ಮಕ್ಕಳನ್ನು ಹುಡುಕಿ, ಅಂತಹ ಮಕ್ಕಳಿಗೆ ಲಸಿಕೆ ನೀಡಿ ಆ ಮನೆಗಳಿಗೆ `ಪಿ’ ಗುರುತನ್ನು ಹಾಕುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಪಲ್ಸ್ ಪೋಲಿಯೋ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ಎಸ್.ಎಂ.ಓ ಡಾ.ಮುಕುಂದ ಗಲಗಲಿ, ಜಿಲ್ಲಾ ಶಸ್ತçಚಿಕಿತ್ಸಕ ಡಾ. ವಿ.ಸಿ.ಕರಿಗೌಡ್ರ, ತಾಲೂಕಾ ವೈದ್ಯಾಧಿಕಾರಿಗಳು, ಜಿಲ್ಲೆಯ ಎಲ್ಲಾ ಅನುಷ್ಠಾನಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಗ್ರಾಮೀಣ ಭಾಗದಲ್ಲಿ 470 ಲಸಿಕಾ ಕೇಂದ್ರಗಳನ್ನು ಹಾಗೂ ನಗರ ಪ್ರದೇಶಗಳಲ್ಲಿ 235 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೆಲಸಕ್ಕೆ ಒಟ್ಟು 1410 ಜನ ಸಿಬ್ಬಂದಿಯವರನ್ನು ಲಸಿಕೆ ಹಾಕುವ ಕೆಲಸಕ್ಕೆ ಒಟ್ಟು 705 ತಂಡಗಳಲ್ಲಿ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಮೇಲ್ವಿಚಾರಣೆ ಮಾಡಲು 146 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅದರಂತೆ 30 ಟ್ರಾನ್ಜಿಟ್ ತಂಡಗಳು ಹಾಗೂ 7 ಸಂಚಾರಿ ತಂಡಗಳ ಮೂಲಕ ಪೋಲಿಯೋ ಹನಿ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಮೀನಾಕ್ಷಿ ಕೆ.ಎಸ್ ಸಭೆಗೆ ತಿಳಿಸಿದರು.