ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಮಕ್ಕಳಲ್ಲಿ ಸಮಯಪ್ರಜ್ಞೆ, ಶಿಸ್ತು, ಹಿರಿಯರಲ್ಲಿ ಗೌರವ, ಅಧ್ಯಯನಶೀಲತೆ, ಹೊಂದಾಣಿಕೆ ಇನ್ನಿತರೆ ಮಾನವೀಯ ಮೌಲ್ಯಗಳನ್ನು ಪಾಲಕರು ಬೆಳೆಸಬೇಕು. ಅಂದಾಗ ಅವರು ಉತ್ತಮ ನಾಗರಿಕರಾಗಿ ಹೊರಹೊಮ್ಮಲು ಸಾಧ್ಯ ಎಂದು ನಿವೃತ್ತ ಪ್ರಾಚಾರ್ಯ ಕೆ.ಎಚ್. ಬೇಲೂರ ಅಭಿಪ್ರಾಯಪಟ್ಟರು.
1992-93ನೇ ಸಾಲಿನ ಸೈಂಟ್ಜಾನ್ ಪ್ರಾಥಮಿಕ ಶಾಲೆಯ 7ನೇ ವರ್ಗದ ಹಾಗೂ 1995-96ನೇ ಸಾಲಿನ ಲೊಯೊಲಾ ಪ್ರೌಢಶಾಲೆಯ 10ನೇ ವರ್ಗದ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಉದ್ಘಾಟಕರಾಗಿ ಆಗಮಿಸಿದ ಮುಖ್ಯೋಪಾಧ್ಯಾಯೆ ಮೇರಿ ಮಸ್ಕರೇನ್ಹಸ್ ಮಾತನಾಡಿ, ಸಮಯವನ್ನು ನಾವು ಗೌರವಿಸಿದರೆ, ನಮ್ಮನ್ನು ಗೌರವಿಸುವ ಸಮಯ ಬಂದೇ ಬರುತ್ತದೆ. ಆ ನಿಟ್ಟಿನಲ್ಲಿ ನಾವು ಸತತ ಪ್ರಯತ್ನದೊಂದಿಗೆ ಮುನ್ನಡೆದಾಗ ನಮ್ಮ ಜೀವನ ಸಫಲವಾಗುತ್ತದೆ ಎಂದರು.
ಫಾದರ ಜೇಕಬ್ ಆ್ಯಂಟೆನಿ ಮಾತನಾಡಿ, ವೈದ್ಯರಿಲ್ಲದೊಡೆ ಆರೋಗ್ಯವಿಲ್ಲ, ವಕೀಲರಿಲ್ಲದೊಡೆ ನ್ಯಾಯವಿಲ್ಲ, ಪೊಲೀಸರಿಲ್ಲದೊಡೆ ಭದ್ರತೆ ಇಲ್ಲ, ವಿಜ್ಞಾನಿಗಳಿಲ್ಲದೊಡೆ ತಂತ್ರಜ್ಞಾನವಿಲ್ಲ. ಆದರೆ ಶಿಕ್ಷಕರಿಲ್ಲದೊಡೆ ಇರ್ಯಾರೂ ಇಲ್ಲ. ಇಂತಹ ಅಕ್ಷರ ಲೋಕದ ನಕ್ಷತ್ರಗಳನ್ನು ಸೃಷ್ಟಿಸಿದ ಅಸಾಮಾನ್ಯ ಶಿಕ್ಷಕರನ್ನು ನೀವು ಗುರುವಂದನಾ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಅಭಿನಂದಿಸುತ್ತಿಡಿರುವುದು ಸ್ತುತ್ಯಾರ್ಹ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ವಿ.ಆರ್. ಕುಂಬಾರ ಮಾತನಾಡಿ, ಹಣ, ಆಸ್ತಿ ಕದಿಯಬಹುದು. ಆದರೆ ವಿದ್ಯೆ ಯಾರಿಂದಲೂ ಕದಿಯಲಾಗದು. ಶಿಕ್ಷಣ ಕೇವಲ ಓದು, ಬರಹ ಮಾತ್ರವಲ್ಲ ಜೊತೆಗೆ ವಿನಯ, ವಿಧೇಯತೆ ಹಾಗೂ ಸಮಾಜದಲ್ಲಿ ಗೌರಯುತವಾಗಿ ಹೇಗೆ ಬದುಕಬೇಕೆಂಬುದನ್ನು ಅರಿತು ನಡೆದುಕೊಳ್ಳುವುದೇ ಶಿಕ್ಷಣವಾಗಿದೆ ಎಂದರು.
ರಾಜಶೇಖರ ವಸ್ತ್ರದ, ಪ್ರಶಾಂತ ಇಳಕಲ್, ಫಮೀದಾ ಕಣವಿ, ಸಿದ್ಧಪ್ಪ ಕಾಟಾಪೂರ, ಆನಂದ ಮಿಠಡೆ ತಮ್ಮ ಶಾಲಾ ಜೀವನದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಲ್ಲ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಲಲಿತಾ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭುವನೇಶ್ವರಿ ಹಿರೇಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ಶಮೀಮ ಕಲಬುರ್ಗಿ ಸ್ವಾಗತಿಸಿದರೆ, ಕಲಾವತಿ ಬ.ಸಂಕನಗೌಡರ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸಂತೋಷ ಬುಜರಿ ವಂದಿಸಿದರು.