ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಿ

0
????????????????????????????????????
Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ತೆಗ್ಗಿನಮಠದಲ್ಲಿ ನಡೆದ ಶ್ರಾವಣ ಸಂಜೆ ಹಾಗೂ ಧರ್ಮ ಸಮಾರಂಭವು ಸಮಾಜಕ್ಕೆ ಮಾದರಿಯಾಗಿ ಹೊರಹೊಮ್ಮಿದೆ ಎಂದು ತೆಗ್ಗಿನ ಮಠದ ಪೀಠಾಧ್ಯಕ್ಷರಾದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Advertisement

ಪಟ್ಟಣದ ತೆಗ್ಗಿನಮಠದ ಟಿ.ಎಂ. ಚಂದ್ರಶೇಖರಯ್ಯ ಸಭಾ ಭವನದಲ್ಲಿ ಶುಕ್ರವಾರ ರಾತ್ರಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀಮಠದಲ್ಲಿ ಕಳೆದ 9 ದಿನಗಳಿಂದ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ನುರಿತ ವ್ಯಕ್ತಿಗಳಿಂದ ವಿವಿಧ ವೈಚಾರಿಕ ವಿಚಾರಗಳು, ಉಪನ್ಯಾಸಗಳನ್ನು ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಮಹನೀಯರ ಗುಣಗಳನ್ನು ಬಿತ್ತುವ ಮೂಲಕ ಸಂಸ್ಕಾರಯುತವಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಹಿಂದುಳಿದ ಹರಪನಹಳ್ಳಿ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಡಾ.ಚಂದ್ರಮೌಳೀಶ್ವ ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಬಳ್ಳಾರಿ ಸಹಕಾರ ಸಂಘಗಳ ಉಪ ನಿಬಂಧಕ ಜಿ.ಎಂ. ವೀರಭದ್ರಯ್ಯ ಮಾತನಾಡಿ, ಹಿಂದೂ ಧರ್ಮದ ಪ್ರತೀಕವೇ ಶ್ರಾವಣ ಮಾಸ. ಇಂತಹ ಸಂದರ್ಭದಲ್ಲಿ ಶ್ರೀಮಠವು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದು ಶ್ಲಾಘನೀಯ ಎಂದರು.

ತೆಗ್ಗಿಮಠ ಶಿಕ್ಷಣ ಮಹಾವಿದ್ಯಾಲಯದ ಡೀನ್ ಟಿ.ಎಂ. ರಾಜಶೇಖರ ಮಾತನಾಡಿ, ಮಠ-ಮಾನ್ಯಗಳು ಧರ್ಮ, ಸಂಸ್ಕೃತಿಯನ್ನು ಉಳಿಸುವ ಮಹತ್ಕಾರ್ಯವನ್ನು ಕೈಗೊಂಡಿವೆ. ನಾವು ಸನಾತನ ಧರ್ಮದ ಉಪದೇಶವನ್ನು ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

ಆಡಿಟರ್ ಅಮೃತ ಮಂಜುನಾಥ ಮಾತನಾಡಿ, ಧರ್ಮ-ಧರ್ಮಗಳ ನಡುವೆ ಗಲಾಟೆ, ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿರುವ ತೆಗ್ಗಿನಮಠದ ಕಾರ್ಯ ಶ್ಲಾಘನೀಯ ಎಂದರು.

ರಾಮಘಟ್ಟ ಪುರವರ್ಗಮಠದ ರಾಜಗುರು ರೇವಣಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ದತ್ತಾತ್ರೇಯ ಪೀಸೆ ಅವರು ನವಜಾತ ಶಿಶುಗಳ ನಿತ್ಯ ಆರೈಕೆ ಮತ್ತು ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ಮುಖ್ಯ ಶಿಕ್ಷಕ ಸಿ.ಎಂ. ಕೊಟ್ರಯ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ತೆಗ್ಗಿನಮಠದ ಜ್ಞಾನಗಂಗೋತ್ರಿ ಮಹವಿದ್ಯಾಲಯದ ಆಡಳಿತಾಧಿಕಾರಿ ಟಿ.ಎಂ. ಪ್ರತೀಕ್, ವರ್ತಕ ಪಿ.ಕೆ.ಎಂ. ನಾಗಲಿಂಗಯ್ಯ, ವಿದ್ಯುತ್ ಗುತ್ತಿಗೆದಾರರ ಎ.ಕರಿಬಸವರಾಜ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತಳವಾರ ಚಂದ್ರಪ್ಪ, ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕ ಶರಣಬಸಪ್ಪ, ಹಿರಿಯ ಪತ್ರಕರ್ತ ಬಿ.ರಾಮಪ್ರಸಾದ ಗಾಂಧಿ, ಉಪನ್ಯಾಸಕ ರಾಮಶಾಸ್ತ್ರೀ, ಸಂಸ್ಕಾರ ಭಾರತಿ ಟ್ರಸ್ಟ್ನ ಅಧ್ಯಕ್ಷ ಮಹಾವೀರ ಭಂಡಾರಿ, ದೇವೇಶ, ಶಿಕ್ಷಕಿ ಸಂಗೀತ ಮಂಜುನಾಥ, ಪ್ರಾಚಾರ್ಯ ಅರುಣಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತೆಗ್ಗಿನಮಠದ ಕಾರ್ಯದರ್ಶಿ ಡಾ. ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಶ್ರೀಮಠದಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಹಲವು ಸಾಧಕರನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಮೂಲಕ ಅವರಿಗೆ ಮತ್ತಷ್ಟು ಸೇವೆ ಮಾಡಲು ಉತ್ತೇಜನ ನೀಡಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here