ಬೆಂಗಳೂರು: ಸಚಿವ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ್ದಕ್ಕೆ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಮಧುಗಿರಿ ಬಂದ್ಗೆ ಕರೆ ನೀಡಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ರಾಜಣ್ಣರನ್ನು ವಜಾ ಮಾಡಿದ್ದನ್ನೇ ಅಸ್ತ್ರ ಮಾಡಿಕೊಂಡಿರುವ ಪ್ರತಿಪಕ್ಷ ಬಿಜೆಪಿ, ಸದನದ ಹೊರಗೂ ಒಳಗೂ ಕಾಂಗ್ರೆಸ್ ನಾಯಕರನ್ನು ಮಾತಿನಲ್ಲೇ ಕಟ್ಟಿ ಹಾಕುವ ಯತ್ನ ಮಾಡಿದೆ.
ಹೌದು ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡುತ್ತಾ, ಸಹಕಾರಿ ಸಚಿವರಾಗಿದ್ದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸಹಿಯಿರುವ ಪತ್ರವನ್ನು ಓದಲು ಮುಂದಾದರು. ಇದಕ್ಕೆ ಆಡಳಿತ ಪಕ್ಷದ ಸಚೇತಕ ಸಲೀಂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಮಾತನಾಡಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.
ತುರ್ತು ವಿಷಯವಾಗಿದ್ದು, ರಾಜಣ್ಣ ಅವರನ್ನ ಸಚಿವ ಸ್ಥಾನದಿಂದ ಯಾಕೆ ವಜಾ ಮಾಡಿದ್ದು ಎಂದು ಪ್ರಶ್ನಿಸಿದರು. ಇದಕ್ಕೆ ಸಿ.ಟಿ.ರವಿ, ರವಿಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಧ್ವನಿಗೂಡಿಸಿದರು.ವಿಪಕ್ಷ ಸದಸ್ಯರ ಮಾತಿಗೆ ವಿರೋಧಿಸಿದ ಆಡಳಿತ ಪಕ್ಷದ ನಾಯಕರು, ರಾಜಣ್ಣ ಅವರ ಮೇಲೆ ಯಾವತ್ತಿನಿಂದ ಪ್ರೀತಿ ಬಂತು ಎಂದು ವ್ಯಂಗ್ಯವಾಡಿದರು. ಸದನದಲ್ಲಿ ಗದ್ದಲ, ಗಲಾಟೆ ಆಗಿದ್ದರಿಂದ ಸಭಾಪತಿ ಅವರು ಕಲಾಪವನ್ನು 10 ನಿಮಿಷ ಮುಂದೂಡಿದರು.