ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಬೇಕು. ಸಂಗೀತ, ನೃತ್ಯ ಸಾಂಸ್ಕೃತಿಕ ಸದಭಿರುಚಿಯಿಂದ ಮನಸ್ಸು ಅರಳುವದು ಎಂದು ಗದುಗಿನ ವಿಜಯ ಲಲಿತ ಕಲಾ ಸಂಸ್ಥೆಯ ಅಧ್ಯಕ್ಷ ಅಶೋಕ ಅಕ್ಕಿ ಹೇಳಿದರು.
ಅವರು ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆಯ ಶ್ರೀ ರಾಜೇಶ್ವರಿ ಕಲಾ ಕುಟೀರದ 24ನೇ ವಾರ್ಷಿಕೋತ್ಸವ ಸಮಾರಂಭ, ಸಂಗೀತ ನೃತ್ಯೋಲ್ಲಾಸ-2025, ಮಹಾಶಿವರಾತ್ರಿ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಗೀತ, ನೃತ್ಯ, ಚಿತ್ರಕಲೆ ಸಾಂಸ್ಕೃತಿಕ ಸಾಹಿತ್ಯಿಕ ಸಂಘಟನೆಗಳನ್ನು ಕಟ್ಟಿ ಬೆಳೆಸುವದು ಸುಲಭದ ಮಾತಲ್ಲ. ಸಂಘಟಿಕರ ಸಂಕಟ ಅನುಭವಿಸಿದವರಿಗೇ ಗೊತ್ತು. ಇವು ಲಾಭವನ್ನು ಕೊಡುವುದಿಲ್ಲ. ಆದರೆ ಮಾನಸಿಕ ನೆಮ್ಮದಿ, ಸಂತೃಪ್ತಿಯನ್ನು ನೀಡಬಲ್ಲವು. ಗದಗ ಪರಿಸರದಲ್ಲಿ ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆಯ ಶ್ರೀ ರಾಜೇಶ್ವರಿ ಕಲಾ ಕುಟೀರ ಕಳೆದ 24 ವರ್ಷಗಳಿಂದ ಗದಗ ಪರಿಸರದಲ್ಲಿ ಸಂಗೀತ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಗಣನೀಯ ಕಾರ್ಯ ಮಾಡಿದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿ, ರಂಗ ನಿರ್ದೆಶಕ ನಿಂಗು ಸೊಲಗಿ ಮಾತನಾಡಿ, ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಹೊರಹೊಮ್ಮಿಸಲು ಇಂತಹ ಸಂಘಟನೆ, ವೇದಿಗಳು ಅಗತ್ಯ. ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸಲು ಪಾಲಕ-ಪೋಷಕರೂ ಮುಂದಾಗಬೇಕೆಂದರು.
ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ, ಪ್ರತಿಭೆಯ ವಿಕಸನ ವ್ಯಕ್ತಿತ್ವ ವಿಕಸನವಾಗಿದ್ದು, ಮಕ್ಕಳಿಗೆ ಆಸ್ತಿ ಮಾಡದೇ ಶಿಕ್ಷಣ, ಸಾಂಸ್ಕೃತಿಕ ಕಲೆಗಳಿಂದ ಅವರನ್ನೇ ಆಸ್ತಿಯನ್ನಾಗಿಸಬೇಕೆಂದರು.
ಗಣ್ಯ ಉದ್ಯಮಿ ವಿಜಯಕುಮಾರ ಗಡ್ಡಿ ಮಾತನಾಡಿ, ರಾಜೇಶ್ವರಿ ಕಲಾ ಕುಟೀರಕ್ಕೆ 24 ವರ್ಷವಾದರೂ ಒಂದು ಸೂರು ಇಲ್ಲದಿರುವದು ವಿಷಾದನೀಯ. ಸರ್ಕಾರ, ಸಾಂಸ್ಕೃತಿಕ ಪ್ರಜ್ಞೆಯುಳ್ಳವರು ಇಂತಹ ಸಂಸ್ಥೆ ಭದ್ರವಾಗಿ ನೆಲೆಯೂರಲು ಸಹಕಾರ ನೀಡಬೇಕೆಂದರು.
ಪತ್ರಕರ್ತ, ಹವ್ಯಾಸಿ ಕಲಾವಿದ ಮೌನೇಶ ಬಡಿಗೇರ ಮಾತನಾಡಿ, ದೇಶ ನಾಡು ಸಮೃದ್ಧವಾಗಿರಲು ಸಂಗೀತ, ಸಾಹಿತ್ಯ, ನೃತ್ಯ, ಸಾಂಸ್ಕೃತಿಕ ಕಲೆಗಳು ಜೀವಂತವಾಗಿರಬೇಕು. ಆ ಕಲೆಗಳನ್ನು ಕರಗತ ಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ಕಾರ್ಯ ಸಮಾಜ ಸಮುದಾಯದಿಂದ ಆಗಬೇಕಿದೆ. ಈ ಹಿಂದೆ ಈ ಕಲೆಗಳು ರಾಜಾಶ್ರಯದಲ್ಲಿ ಬೆಳೆದು ಬಂದಿದ್ದು, ಇದ್ದುಳ್ಳವರು ಇಂತಹ ಕಲೆಗಳನ್ನು ಪ್ರೋತ್ಸಾಹಿಸಬೇಕು. ಶಿಕ್ಷಣ ಎಷ್ಟು ಮುಖ್ಯವೋ ಮನೋಲ್ಲಾಸಕ್ಕೆ ಸಾಂಸ್ಕೃತಿಕ ಕಲೆಗಳೂ ಅಷ್ಟೇ ಮುಖ್ಯ ಎಂದರು.
ಉಪನ್ಯಾಸಕ ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಗದುಗಿನ ಸಾಂಸ್ಕೃತಿಕ ಲೋಕಕ್ಕೆ ರಾಜೇಶ್ವರಿ ಕಲಾ ಕುಟೀರ ಅಮೋಘ ಕೊಡುಗೆ ನೀಡಿದೆ. ಪ್ರಾಥಮಿಕ ಹಂತದಿಂದ ಪ್ರೌಢ ಹಂತದವರೆಗೆ ಸಂಗೀತ, ನೃತ್ಯ, ಸಾಂಸ್ಕೃತಿಕ ಕಲೆಗಳನ್ನು ವ್ಯಾಸಂಗ ಮಾಡಿದ ಆಸಕ್ತರು ಮುಂದೆ ಉನ್ನತ ಶಿಕ್ಷಣಕ್ಕೆ ಹೋದಾಗ ಕ್ರಮೇಣ ಆಸಕ್ತಿ ಕಡಿಮೆ ಮಾಡಿಕೊಳ್ಳದೇ ಅದು ನಿರಂತರವಾಗಬೇಕು ಎಂದರು.
ಪೂಜಾ ವೇರ್ಣೆಕರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜ್ಯೋತಿ ಹೆರಲಗಿ ನಿರೂಪಿಸಿದರು, ನೃತ್ಯ ನಿರ್ದೇಶಕಿ ಮಾಲಾ ತಂಬ್ರಳ್ಳಿ ವಂದಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜೇಶ್ವರಿ ಕಲಾ ಕುಟೀರದ ಸಂಸ್ಥಾಪಕ ಅಧ್ಯಕ್ಷ ಗಜಾನನ ವೇರ್ಣೆಕರ, ಕಳೆದ 24 ವರ್ಷಗಳಿಂದ ಗದಗ ಪರಿಸರದಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಸಂಸ್ಥೆ ಪರಿಶ್ರಮಿಸಿದೆ. ಕಲಾಭಿಮಾನಿಗಳು, ಚುನಾಯಿತ ಪ್ರತಿನಿಧಿಗಳು ಪ್ರೋತ್ಸಾಹ ಸಹಾಯ ಮಾಡಿದರೆ ಸಂಸ್ಥೆ ಸದೃಢಗೊಂಡು ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಕಾರ್ಯ ಮಾಡಲಿದೆ ಎಂದರು.