ಸಿನಿಮಾ ಪ್ರಚಾರದ ಸಮಯದಲ್ಲಿ ಮಾತ್ರ ಸ್ವಚ್ಛತಾ ಕಾರ್ಮಿಕರನ್ನು ಹುಡುಕಿ ಫೋಟೋ ತೆಗೆಸಿಕೊಳ್ಳುವ ಸೆಲೆಬ್ರಿಟಿಗಳ ನಡುವೆ, ಸೂಪರ್‌ಸ್ಟಾರ್ ರಜನಿಕಾಂತ್ ನಡೆ ಸಂಪೂರ್ಣ ವಿಭಿನ್ನವಾಗಿದೆ. ಇದು ಯಾವುದೇ ಡೈಲಾಗ್ ಅಲ್ಲ, ನಿಜವಾದ ಜೀವನದ ಹೀರೋಗೆ ಸಲ್ಲಿಸಿದ ಗೌರವ.
ಚೆನ್ನೈನಲ್ಲಿ ಸ್ವಚ್ಛತಾ ಕಾರ್ಮಿಕೆಯಾಗಿ ಕೆಲಸ ಮಾಡುತ್ತಿರುವ ಪದ್ಮ ಅವರು ಇತ್ತೀಚೆಗೆ ಕಸದಲ್ಲಿ ಸಿಕ್ಕಿದ್ದ 40 ಗ್ರಾಂ ಚಿನ್ನವನ್ನು ಪ್ರಾಮಾಣಿಕವಾಗಿ ಅದರ ಮಾಲೀಕರಿಗೆ ಹಿಂತಿರುಗಿಸಿದ್ದರು. ಈ ಒಂದು ಕಾರ್ಯವೇ ಪದ್ಮ ಅವರನ್ನು ರಾಜ್ಯದ ಗಮನ ಸೆಳೆಯುವ ವ್ಯಕ್ತಿಯನ್ನಾಗಿ ಮಾಡಿತು. ಪ್ರಾಮಾಣಿಕತೆಗೆ ಸಾಕ್ಷಿಯಾದ ಈ ಘಟನೆಯನ್ನು ಗಮನಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಪದ್ಮ ಅವರನ್ನು ಸನ್ಮಾನಿಸಿ ಒಂದು ಲಕ್ಷ ರೂಪಾಯಿ ಬಹುಮಾನ ನೀಡಿದ್ದರು.
ಈಗ ಅದಕ್ಕಿಂತಲೂ ದೊಡ್ಡ ಗೌರವ ಪದ್ಮ ಅವರಿಗೆ ದೊರೆತಿದೆ. ನಟ ರಜನಿಕಾಂತ್ ಅವರು ಪದ್ಮ ಮತ್ತು ಅವರ ಕುಟುಂಬವನ್ನು ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿ, ಹಾರ-ಶಾಲು ಹಾಕಿ ಗೌರವಿಸಿದ್ದಾರೆ. ಜೊತೆಗೆ ಪದ್ಮ ಅವರ ಕೊರಳಿಗೆ ಚಿನ್ನದ ಸರವನ್ನೂ ಉಡುಗೊರೆಯಾಗಿ ನೀಡಿ ಆಶೀರ್ವದಿಸಿದ್ದಾರೆ.
ರಜನಿಕಾಂತ್ ಅವರಿಗೆ ಯಾರಾದರೂ ಮಾಡಿದ ಒಳ್ಳೆಯ ಕೆಲಸ ಮನಸ್ಸಿಗೆ ತಟ್ಟಿದರೆ, ಅವರು ಅದನ್ನು ಮರೆತವರಲ್ಲ. ‘ಕಾಂತಾರ’ ಸಿನಿಮಾ ಮೆಚ್ಚಿದಾಗ ರಿಷಬ್ ಶೆಟ್ಟಿಗೆ ಚಿನ್ನದ ಸರ ಹಾಕಿದ್ದೂ ಇದೆ. ವರ್ಷಗಳಿಂದ ಐದು ರೂಪಾಯಿಗೆ ಪರೋಟ ಮಾರುವ ಅಭಿಮಾನಿಯನ್ನು ಮನೆಗೆ ಕರೆಸಿ ಗೌರವಿಸಿದ್ದೂ ಇದೆ. ಈಗ ಅದೇ ಸಾಲಿಗೆ ಸ್ವಚ್ಛತಾ ಕಾರ್ಮಿಕೆಯಾದ ಪದ್ಮ ಸೇರಿದ್ದಾರೆ.
ಇದು ಪ್ರಚಾರದ ಕಥೆಯಲ್ಲ. ಇದು ಮೌಲ್ಯಗಳ ಕಥೆ. ವೇದಿಕೆ, ಮೈಕ್, ಫ್ಲೆಕ್ಸ್ ಇಲ್ಲದೆ ಒಳ್ಳೆಯತನವನ್ನು ಗುರುತಿಸುವ ಸಂಸ್ಕೃತಿಗೆ ರಜನಿಕಾಂತ್ ಮತ್ತೆ ಜೀವ ನೀಡಿದ್ದಾರೆ. ನಿಜವಾದ ಸ್ಟಾರ್‌ಡಮ್ ಎಂದರೆ ಇದೇ.



