ವಿಜಯಸಾಕ್ಷಿ ಸುದ್ದಿ, ಗದಗ: ಮಳೆ ಕೈಕೊಟ್ಟು ಮುಂಗಾರು ಬೆಳೆಗಳು ಹಾನಿಗೊಂಡು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯಲ್ಲಿ ಹೆಸರು, ಗೋವಿನಜೋಳ, ಹತ್ತಿ, ಈರುಳ್ಳಿ, ಸೋಯಾಬಿನ್, ಉದ್ದು ಹಾಗೂ ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದರು. ಆದರೆ ನಿರೀಕ್ಷಿತ ಮಳೆಯಾಗದೆ ಬಹುತೇಕ ಬೆಳೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.
ಪ್ರತಿ ಎಕರೆಗೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಕೂಲಿಗಾಗಿ ರೈತರು ₹15 ಸಾವಿರದಿಂದ ₹25 ಸಾವಿರದವರೆಗೆ ವೆಚ್ಚ ಮಾಡಿದ್ದಾರೆ. ಇದೀಗ ಬೆಳೆ ಕೈಕೊಟ್ಟಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ ಹಾಗೂ ನರಗುಂದ ತಾಲೂಕುಗಳ ಹಲವು ಪ್ರದೇಶಗಳಲ್ಲಿ ಬೆಳೆ ಹಾನಿ ತೀವ್ರವಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಜಂಟಿ ಸಮೀಕ್ಷೆಯಲ್ಲಿ ಜಿಲ್ಲಾದ್ಯಂತ ₹218 ಕೋಟಿಗೂ ಅಧಿಕ ಬೆಳೆ ನಷ್ಟ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಯಾವುದೇ ತಾಲೂಕನ್ನು ಕಡೆಗಣಿಸದೆ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು.
– ತೋಟಪ್ಪ (ರಾಜು) ಕುರುಡಗಿ, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ



