ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ: ಹಾಸ್ಯ ನಟ, ವೃತ್ತಿ ರಂಗಭೂಮಿಯ ಹೆಸರಾಂತ ಕಲಾವಿದ ರಾಜು ತಾಳಿಕೋಟಿ ನಿಧನದಿಂದ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದು ರಂಗಪೋಷಕ ಬೀರಬ್ಬಿ ಬಸವರಾಜ ಸಂತಾಪ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರಂಗಭೂಮಿ ಗೆಳೆಯರು, ಸಾಹಿತ್ಯಾಸಕ್ತರು, ಪತ್ರಕರ್ತರು, ಒಡನಾಡಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜು ತಾಳಿಕೋಟಿ ರಂಗ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜು ತಾಳಿಕೋಟಿ ಅವರ ನಿಧನದಿಂದ ರಂಗಭೂಮಿ ಅನಾಥವಾಗಿದೆ. ಅವರ ನಾಟಕ ಕಲಿಯುಗದ ಕುಡಕ’ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ದಾಖಲೆ ನಿರ್ಮಿಸಿದೆ. ಕುಡುಕನ ಪಾತ್ರ ರಾಜು ತಾಳಿಕೋಟಿಗೆ ಬಹಳಷ್ಟು ಹೆಸರು ತಂದು ಕೊಟ್ಟಿತ್ತು. ವೃತ್ತಿ ರಂಗಭೂಮಿ ನಾಟಕ ಕಂಪನಿಗಳು ಸಾಕಷ್ಟು ನಷ್ಟ, ಏಳು-ಬೀಳುಗಳ ನಡುವೆ ಜನರಿಗೆ ಮನರಂಜನೆ ನೀಡುವ ಪರಂಪರೆ ಮುಂದುವರೆಸಿವೆ ಎಂದು ಹೇಳಿದರು.
ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಸುರೇಶ್ ಅಂಗಡಿ ಮಾತನಾಡಿ, ನಾಟಕಗಳಲ್ಲಿ, ಸಿನಿಮಾಗಳಲ್ಲಿ ಉತ್ತರ ಕನ್ನಡ ಭಾಷೆಯ ಸೊಗಡನ್ನು ಉಣಬಡಿಸಿದ ಅಪರೂಪದ ನಟ ರಾಜು ತಾಳಿಕೋಟಿ ಎಂದರು.
ಶಿಕ್ಷಕ, ರಂಗಭಾರತಿ ನಟ ಪಿ.ಎಂ. ಕೊಟ್ರಸ್ವಾಮಿ ಮಾತನಾಡಿ, ಧಾರವಾಡ ರಂಗಾಯಣದ ನಿರ್ದೇಶಕರಾಗಿ ಬಹುಭಾಷಾ ನಾಟಕೋತ್ಸವ ಆಯೋಜಿಸುವ ಕನಸನ್ನು ರಾಜು ಕಂಡಿದ್ದರು ಎಂದು ತಿಳಿಸಿದರು.
ಪತ್ರಕರ್ತರಾದ ಬಿಚ್ಚುಗತ್ತಿ ಖಾಜಾ ಹುಸೇನ್, ಎಂ.ದಯಾನಂದ, ದೇವೇಂದ್ರಪ್ಪ, ಎಲ್.ಖಾದರಬಾಷಾ, ನಾಗರಾಜ್ ಮಲ್ಕಿಒಡೆಯರ್, ಗಾಯಕ ನಾಗೇಶ್ ಮುಂತಾದವರು ರಾಜು ತಾಳಿಕೋಟಿ ರಂಗ ಸೇವೆ ಕುರಿತು ಮಾಹಿತಿ ಹಂಚಿಕೊಂಡರು. ಶಾಖಾ ಗ್ರಂಥಾಲಯಾಧಿಕಾರಿ ಬಿ. ನಾರಾಯಣ್, ಎಐಟಿಯುಸಿ ಸುರೇಶ್ ಹಲಗಿ, ಗುರುಸ್ವಾಮಿ ಡಿ.ಎಂ., ವೀರಯ್ಯ ಸ್ವಾಮಿ, ಸುಭಾಷ್ ಹೊಳಲು ಮುಂತಾದವರಿದ್ದರು.