ವಿಜಯಸಾಕ್ಷಿ ಸುದ್ದಿ, ನರೇಗಲ್ : ಧರ್ಮ, ಆತ್ಮಸಾಕ್ಷಿಗೆ ಅನುಗುಣವಾಗಿ ದೇವರ ಸ್ಮರಣೆಯೊಂದಿಗೆ ಪ್ರಬುದ್ಧತೆ ಹೊಂದುವದೇ ಮಾನವೀಯ ಮೌಲ್ಯಗಳಾಗಿವೆ ಎಂದು ಹುಬ್ಬಳ್ಳಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ನಿರ್ಮಲಕ್ಕ ಹೇಳಿದರು.
ಅವರು ಇಲ್ಲಿನ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನಿಗೆ ಮೌಲ್ಯಗಳನ್ನು ಬೆಳೆಸುವ ಸದ್ಗುಣಗಳು ಬೇಕು. ಅದರಿಂದ ಪ್ರತಿಯೊಬ್ಬ ಜೀವಿ ಶಾಂತಿ, ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ. ಹಳ್ಳಗಳಿಂದ ಹರಿಯುವ ನೀರು ಸಮುದ್ರ ಸೇರುವಂತೆ ವಿವಿಧ ಧರ್ಮದ ಆಚಾರ ವಿಚಾರಗಳು ದೇವರಲ್ಲಿ ಸೇರುತ್ತವೆ. ಹಿಂದಿನ ಕಾಲದ ಕುಟುಂಬಗಳಲ್ಲಿ ಎಲ್ಲರೂ ಒಂದೇ ಎಂಬ ಭಾವನಾತ್ಮಕ ಸಂಬಂಧದೊಂದಿಗೆ ಅಭಿವ್ಯಕ್ತ ಕುಟುಂಬಗಳಿದ್ದವು. ಇಂದು ಇಬ್ಬರು ದಂಪತಿಗಳಿಗೆ ಒಂದು ಅಥವಾ ಎರಡು ಮಕ್ಕಳನ್ನು ಹೆರುವುದೇ ದುಸ್ತರವಾಗಿದೆ. ಇಂದು ಕುಟುಂಬ ಚಿಕ್ಕದಿದ್ದರೂ ನೆಮ್ಮದಿ ಎಂಬುದು ಮರಿಚೀಕೆಯಾಗಿದೆ ಎಂದು ಹೇಳಿದರು.
ನರೇಗಲ್ಲ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಂತಿ, ಸಹನೆ ಎಂಬುದು ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ. ಅದು ನಮ್ಮ ಅಂತರಾತ್ಮ ಶುದ್ಧಿಯಿಂದ ಬರುವಂತದ್ದಾಗಿದೆ. ಇಂತಹ ಆಧ್ಯಾತ್ಮಿಕ ಕೇಂದ್ರಗಳಿಗೆ ಬಂದು ಕೇವಲ ಒಂದು ಗಂಟೆ ನಿಮ್ಮ ಸಮಯವನ್ನು ಮೀಸಲಿಟ್ಟರೆ ಸಾಕು ನಿಮ್ಮ ಆತ್ಮ ಸಾಕ್ಷಾತ್ಕಾರಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.
ಈಶ್ವರೀಯ ವಿಶ್ವವಿದ್ಯಾಲಯದ ಎಲ್ಲ ಬಳಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನಂತರ ಎಲ್ಲರಿಗೂ ಆಂಧ್ರಪ್ರದೇಶ ಆದ್ವಾನಿಯ ಈಶ್ವರೀಯ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ. ನಿರ್ಮಲಕ್ಕ ಹಾಗೂ ಲಕ್ಷ್ಮಿ ರಕ್ಷಾಭಂದನ ಕವಚ ಕಟ್ಟಿದರು.