ರಂಜಾನ್ ಹಬ್ಬ ಜೀವನದ ಪಾಠ ಕಲಿಸುತ್ತದೆ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ತಿಂಗಳಿಡೀ ಕಠಿಣ ಉಪವಾಸದ ಆಚರಣೆಯ ಮೂಲಕ ಆಚರಿಸುವ ರಂಜಾನ್ ಹಬ್ಬದಿಂದ ಮಾನವೀಯ ಮೌಲ್ಯ ಪ್ರಾಪ್ತಿ ಆಗುತ್ತದೆ ಎಂದು ಮುಸ್ಲಿಂ ಸಮಾಜದ ಧರ್ಮಗುರು ಖಾದರಸಾಬ ಮುಲ್ಲಾ ಹೇಳಿದರು.

Advertisement

ಗ್ರಾಮದ ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಯುಕ್ತ ಜರುಗಿದ ಪ್ರಾರ್ಥನೆಯ ನಂತರ ಮಾತನಾಡಿದ ಅವರು, ಉತ್ತಮ ಮಳೆ ಬೆಳೆಯಾಗಿ ರೈತರಿಗೆ ಆರ್ಥಿಕ ಶಕ್ತಿ, ತನ್ಮೂಲಕ ದೇಶದ ಶಕ್ತಿ ಹೆಚ್ಚಾಗಲಿ, ಎಲ್ಲರಿಗೂ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ರಂಜಾನ್ ಹಬ್ಬ ಮುಸ್ಲಿಮರಿಗೆ ಜೀವನದ ಅನೇಕ ಪಾಠ ಕಲಿಸಿಕೊಡುತ್ತದೆ. ಮನುಷ್ಯನ ದೇಹವನ್ನು ಹಸಿವಿಗೆ ಒಳಪಡಿಸಿ ಗೆಲ್ಲುವುದು ಅತ್ಯಂತ ಕಠಿಣ ವೃತ. ಇಂತಹ ವೃತ-ಆಚರಣೆಗಳನ್ನು ಮಾಡುವುದರಿಂದ ಹಸಿವಿನ ಕುರಿತು ತಿಳಿಯುತ್ತದೆ ಮತ್ತು ಉಪವಾಸ ಆಚರಣೆ ಮಾಡುವುದರ ಮೂಲಕ ಪ್ರತಿಯೊಬ್ಬರೂ ಕೆಟ್ಟ ವಿಚಾರ, ಕೆಟ್ಟ ಕೆಲಸಗಳನ್ನು ಬಿಟ್ಟು ಎಲ್ಲರನ್ನು ಸಹೋದರತ್ವದ ಭಾವನೆಯಿಂದ ಕಾಣಬೇಕು ಎಂದರು.

ಡಂಬಳ ಹೋಬಳಿಯ ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್‌ನ್ನು ಶ್ರದ್ಧಾ-ಭಕ್ತಿ, ಸಡಗರ, ಸಂಭ್ರಮದಿಂದ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಆಚರಿಸಿದರು. ಸೋಮವಾರ ಬೆಳಿಗ್ಗೆ ಜುಮ್ಮಾ ಮಸೀದಿ ಮೂಲಕ ಹೊರಟು ಈದ್ಗಾ ಮೈದಾನದಲ್ಲಿ ಹಿರಿಯರು, ಯುವಕರು ಶ್ವೇತವಸ್ತ್ರಧಾರಿಗಳಾಗಿ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರಂಜಾನ್ ನಿಮಿತ್ತ ಖಾದರಸಾಬ ಮುಲ್ಲಾ ಧರ್ಮಗುರುಗಳ ಸಮ್ಮುಖದಲ್ಲಿ ಕುರಾನ್ ಪಠಣ ಸೇರಿದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ಈದ್ಗಾ ಮೈದಾನದ ಹೊರಗಡೆ ಇದ್ದ ಬಡವರಿಗೆ ದಾನ ನಡೆಯಿತು. ಪ್ರತಿ ಮನೆಯಲ್ಲೂ ಈದ್ ಉಲ್ ಫಿತರ್‌ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಕ್ಕಳು, ಮಹಿಳೆಯರು, ಯುವತಿಯರು ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಹಬ್ಬ ಆಚರಿಸಿದರು.

ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷ ಬಸೀರಹಮ್ಮದ ತಾಂಬೋಟಿ, ಖಾಜಾಹುಸೇನ ಹೊಸಪಟಿ, ಜಂದಿಸಾಬ ಸರಕಾವಾಸ, ಹುಸೇನಸಾಬ ಮೂಲಿಮನಿ, ಜಾಕೀರ ಮೂಲಿಮನಿ, ಬುಡ್ನೆಸಾಬ ಅತ್ತಾರ, ಶಫೀಕ ಮೂಲಿಮನಿ, ಹುಸೇನಸಾಬ ದೊಡ್ಡಮನಿ, ಮಮ್ಮದರಫೀಕ ಮನಿಯಾರ, ಬಾಬುಸಾಬ ಸರಕಾವಾಸ, ಮುರ್ತುಜಾ ಮನಿಯಾರ, ಫೇರೋಜಖಾನ ಹೊಸಪೇಟಿ, ಹುಸೇನಸಾಬ ಹೊಸಬಾವಿ, ನೂರಹಮ್ಮದ ಸರಕಾವಾಸ, ರಾಯಸಾಬ ಕಾಸ್ತಾರ, ಇಂತಿಯಾಜ ದಪೇದಾರ, ರಿಯಾಜ ಚಾಂದಖಾನವರ, ಮಹಮ್ಮದರಫೀಕ ಹೊಸಪೇಟಿ, ಎಮ್.ಆರ್. ಆಲೂರ, ರಜಾಕಸಾಬ ತಾಂಬೋಟಿ, ಮಾಬುಸಾಬ ಸರಕಾವಾಸ, ಮಹಮ್ಮದಗೌಸ ಅತ್ತಾರ ಮುಂತಾದವರಿದ್ದರು.

ಸಾಮೂಹಿಕ ಪ್ರರ್ಥನೆ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ, ರಂಜಾನ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ನಿಮಿತ್ತ ಮನೆಗಳಲ್ಲಿ ಗೋಡಂಬಿ, ಪಿಸ್ತಾ, ಬಾದಾಮ ಮತ್ತಿತರ ಪದಾರ್ಥಗಳೊಂದಿಗೆ ತಯಾರಿಸಿದ ಸುರಕುಂಬ (ಪಾಯಸ) ಸವಿದರು. ಅಕ್ಕಪಕ್ಕದ ಮನೆಯವರಿಗೂ ಸುರಕುಂಬ ನೀಡಿ, ಸೌಹಾರ್ದತೆ ಮೆರೆದರು.


Spread the love

LEAVE A REPLY

Please enter your comment!
Please enter your name here