HomeArt and Literatureಭಾರತಕ್ಕೆ ಬೆಳಕು ತಂದ `ರಾಮನ್ ಎಫೆಕ್ಟ್'

ಭಾರತಕ್ಕೆ ಬೆಳಕು ತಂದ `ರಾಮನ್ ಎಫೆಕ್ಟ್’

For Dai;y Updates Join Our whatsapp Group

Spread the love

ವಿಜ್ಞಾನ-ತಂತ್ರಜ್ಞಾನವಿಲ್ಲದೆ ನಮ್ಮ ಬದುಕನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಏಕೆಂದರೆ, ವಿಜ್ಞಾನ ಸಾಧಿಸಿ ತೋರಿಸುವ ಸತ್ಯಗಳು ಮತ್ತು ತಂತ್ರಜ್ಞಾನ ತಂದುಕೊಡುವ ನಿತ್ಯದ ಸೌಲಭ್ಯಗಳು-ಇವೆರಡೂ ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತವೆ. ನಮ್ಮ ದೇಶದಲ್ಲಿ ವಿಜ್ಞಾನಕ್ಕೆ ದೊಡ್ಡ ಮನ್ನಣೆಯನ್ನು ತಂದುಕೊಟ್ಟವರೆAದರೆ ಸರ್ ಸಿ.ವಿ. ರಾಮನ್. 1928ರ ಫೆ.28ರಂದು ಅವರು ಪ್ರಕಟಿಸಿದ ಮಹತ್ವದ ಸಂಶೋಧನೆ ‘ರಾಮನ್ ಎಫೆಕ್ಟ್’. ಅದರ ಗೌರವಾರ್ಥ ಈ ದಿನವನ್ನು ದೇಶದಲ್ಲಿ ‘ವಿಜ್ಞಾನ ದಿನ’ವನ್ನಾಗಿ ಆಚರಿಸಲಾಗುತ್ತದೆ.

ಎಚ್ಚರಿಕೆಯ ಕ್ರಮಬದ್ಧ ಪ್ರಯತ್ನಗಳಿಲ್ಲದೇ ವೈಜ್ಞಾನಿಕ ಆವಿಷ್ಕಾರ ಅಸಂಭವ. ರಾಮನ್ ಮತ್ತು ರಾಮನ್ ಎಫೆಕ್ಟ್ ಇದಕ್ಕೆ ಅತ್ಯುತ್ತಮ ನಿದರ್ಶನ. ತತ್ಪರಿಣಾಮ ಬೆಳಕಿನ ನೂತನ ವಿದ್ಯಮಾನದ ಆವಿಷ್ಕಾರವನ್ನು ದೇಶದಲ್ಲಿ ಪ್ರತಿವರ್ಷ ಫೆಬ್ರುವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ನಿಸರ್ಗದ ವಿದ್ಯಮಾನಗಳ ತಳದಲ್ಲಿರುವ ನಿಯಮಗಳ ಅನ್ವೇಷಣೆಯೇ ವಿಜ್ಞಾನ. ಏನು, ಏಕೆ, ಯಾವಾಗ ಯಾರು, ಯಾವುದು, ಎಲ್ಲಿ, ಹೇಗೆ ಎನ್ನುವ ಸಪ್ತ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದಲ್ಲಿ ವಿಜ್ಞಾನ ಮೈದಳೆಯುತ್ತದೆ.

ಹೊಸ ಪರಿಕಲ್ಪನೆ, ಸಿದ್ಧಾಂತವನ್ನು ವಿಜ್ಞಾನ ಪ್ರಪಂಚವೂ ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ಭೂಮಿಯೇ ವಿಶ್ವದ ಕೇಂದ್ರವೆಂಬ ಪರಿಕಲ್ಪನೆಯಿಂದ ಕಳಚಿಕೊಳ್ಳಲು ವಿಜ್ಞಾನಕ್ಕೂ ಸಾವಿರಾರು ವರ್ಷಗಳು ಬೇಕಾಯಿತು. ಹಲವು ಸೈದ್ಧಾಂತಿಕ ತಿಕ್ಕಾಟಗಳು, ದಮನಗಳು, ಹೋರಾಟಗಳು ನಡೆದುವು. ಅಂದರೆ ವಿಜ್ಞಾನದ ಹಾದಿ ಎಂದೂ ಸುಗಮವಲ್ಲ. ಭೌತವಿಜ್ಞಾನದ ಇತಿಹಾಸವನ್ನು ಗಮನಿಸಿದವರಿಗೆ ತಿಳಿದಿದೆ. ಬೆಳಕಿನ ಸ್ವರೂಪದ ಕುರಿತಾಗಿಯೇ ನಡೆದ ಚಿಂತನೆಗಳು ಭೌತವಿಜ್ಞಾನವನ್ನು ಕಳೆದ ಐನೂರು ವರ್ಷಗಳಿಂದ ಮುನ್ನಡೆಸುತ್ತ ಬಂದಿದೆ. ವಿಜ್ಞಾನ ಸದಾ ರೋಚಕವಾಗಿರುತ್ತದೆ.

ಇದರೊಂದಿಗೆ ಅನಿರಿಕ್ಷಿತ ಅಥವಾ ನಾಟಕೀಯ ಆವಿಷ್ಕಾರಗಳು ವಿಜ್ಞಾನದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಯಾವುದೋ ಗುರಿಯತ್ತ ಪ್ರಯೋಗ ನಡೆಸುತ್ತಿರುವಾಗ ಇನ್ನಾವುದೋ ಹೊಸದೊಂದು ಗೋಚರವಾಗುತ್ತದೆ. ಉದಾಹರಣೆಗೆ, ಸ್ನಾನದ ತೊಟ್ಟಿಯಲ್ಲಿ ಇಳಿದ ಆರ್ಕಿಮಿಡಿಸ್ ತೊಟ್ಟಿಯಲ್ಲಿ ನೀರಿನ ಮಟ್ಟ ಏರುವುದನ್ನು ಗಮನಿಸಿ ವಸ್ತುಗಳ ತೇಲುವ ನಿಯಮವನ್ನು ರೂಪಿಸಿದ್ದು, ತೊಟ್ಟಿನಿಂದ ಕಳಚಿದ ಸೇಬು ಹಣ್ಣು ಭೂಮಿಗೆ ಬೀಳುವುದನ್ನು ಕಂಡ ನ್ಯೂಟನ್ ಗುರುತ್ವ ಬಲದ ಸಿದ್ಧಾಂತವನ್ನು ಮಂಡಿಸಿದರು.

ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್. ರಾಮನ್ ಅವರದು ಬಾಲ್ಯ ಪ್ರತಿಭೆ. ದಾಖಲೆಯ ಅಂಕಗಳೊಂದಿಗೆ 12ರ ವಯಸ್ಸಿಗೇ ಮೆಟ್ರಿಕ್ಯುಲೇಶನ್ ಮುಗಿಸಿ, ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿಗೆ ಸೇರಿದರು. 19ರ ಹರೆಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕಾಲೇಜು ದಿನಗಳಲ್ಲಿಯೇ ರಾಯಲ್ ಸೊಸೈಟಿ ಆಫ್ ಫಿಲಾಸಫಿಕಲ್ ಟ್ರಾನ್ಸಾಕ್ಷನ್‌ನಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದರು.

1921 ಸೆಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಿ ಮರಳಿ ತವರಿಗೆ ರಾಮನ್ ಪ್ರಯಾಣಿಸುತ್ತಿದ ಹಡಗು ಮೆಡಿಟರೇನಿಯನ್ ಸಮುದ್ರದಲ್ಲಿ ಸಾಗುತ್ತಿತ್ತು. ಸಮುದ್ರದ ಅಚ್ಚ ನೀಲಿ ಬಣ್ಣವನ್ನು ಕಂಡ ರಾಮನ್ ಬೆರಗಾದರು. ಅರೇ ಇದೇನಿದು? ಎಂಥ ನೀಲಿ, ಎಂಥ ಚೆಲುವು! ಬಣ್ಣನೆಗೆ ನಿಲುಕದ ಈ ಬಣ್ಣವು ಸಮುದ್ರಕ್ಕೆ ಬಂದದ್ದು ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು. ಹಾಗೆ ನೋಡಿದರೆ ಶುಭ್ರ ಬಾನಿನ ಬಣ್ಣವೂ ನೀಲಿಯೇ.

ಬಾನಿಗೆ ನೀಲಿಯನ್ನು ವಿವರಿಸಿದ ರ್ಯಾಲೆ, ಅದೇಕೋ ಸಾಗರದ ನೀಲಿಯನ್ನು ವಿವರಿಸುವಲ್ಲಿ ಎಡವಿದರು. ಬಾನಿನ ನೀಲಿ ಸಾಗರದ ನೀರಿನಿಂದ ಪ್ರತಿಫಲಿಸಲ್ಪಟ್ಟು ಸಾಗರ ನೀಲವಾಗಿ ಕಾಣಿಸುತ್ತದೆಂದು ವಿವರಣೆ ನೀಡಿ ಸುಮ್ಮನಾದರು.

ಆದರೆ ರಾಮನ್ ತನ್ನೆದುರು ಹರಡಿ ಚೆಲ್ಲಿದ ನೀಲ ನೀರಿನ ರಾಶಿಯನ್ನು ನೋಡುತ್ತಿದ್ದಂತೆ ನೀರಿನ ಅಣುಗಳಿಂದ ನೀಲಿ ಬಣ್ಣದ ಬೆಳಕು ಅತ್ಯಧಿಕ ಪ್ರಮಾಣದಲ್ಲಿ ಚದರಿಸಲ್ಪಡುವುದೇ ಕಾರಣವೆಂದು ಅವರಿಗನ್ನಿಸಿತು. ಹಡಗಿನಲ್ಲಿಯೇ ಸಮುದ್ರದ ನೀರನ್ನು ಬಾಟಲಿಗಳಲ್ಲಿ ಸಂಗ್ರಹಿಸಿದರು. ಅವರ ಕಿಸೆಯಲ್ಲಿರುತ್ತಿದ್ದ ಚಿಕ್ಕ ರೋಹಿತ ದರ್ಶಕವನ್ನು ಬಳಸಿಕೊಂಡು ನೀರಿನಲ್ಲಿ ಬೆಳಕಿನ ಚದರಿಕೆಯನ್ನು ಪರೀಕ್ಷಿಸಿದರು. ಮುಂದಿನ 15 ದಿನಗಳ ಪಯಣದುದ್ದಕ್ಕೂ ಪ್ರಯೋಗ ಸಾಗಿತು. ಫಲಿತಾಂಶಗಳು ಸಂಶೋಧನೆ ಲೇಖನವಾಯಿತು. ಮುಂಬಯಿಯಲ್ಲಿ ಇಳಿಯುತ್ತಲೇ ಪ್ರತಿಷ್ಠಿತ ನೇಚರ್ ಪತ್ರಿಕೆಗೆ ಲೇಖನವನ್ನು ರವಾನಿಸಿದರು. ಪ್ರಕಟವಾದ ಆ ಲೇಖನದಲ್ಲಿ ಸಮುದ್ರದ ನೀಲಿಗೆ ಬೇರೆಯ ಕಾರಣವಿರಬಹುದೆನ್ನುವ ಗುಮಾನಿ ವ್ಯಕ್ತ ಪಡಿಸುತ್ತ ಇನ್ನಷ್ಟು ಸಂಶೋಧನೆಯ ಅಗತ್ಯವನ್ನು ಹೇಳಿದರು.

ರಾಮನ್ ಮತ್ತು ಅವರ ಸಹದ್ಯೋಗಿ ಕೆ.ಎಸ್. ಕೃಷ್ಣನ್ ಪ್ರಯೋಗ ಆರಂಭಿಸಿದರು. ಏಳು ವರ್ಷಗಳ ಸತತ ಪರಿಶ್ರಮದ ಬಳಿಕ, 1928, ಫೆಬ್ರವರಿ 28, ಬೆಳಗ್ಗೆ ಹತ್ತರ ಹೊತ್ತಿಗೆ ತಮ್ಮ ಪ್ರಯೋಗದಲ್ಲಿ ರಾಮನ್ ಯಶಸ್ಸು ಕಂಡರು. ಇದು ಮುಂದೆ ರಾಮನ್ ಪರಿಣಾಮ ಎಂದು ಜಗತ್ಪ್ರಸಿದ್ಧಿ ಪಡೆದು ಹಲವಾರು ಆವಿಷ್ಕಾರಗಳಿಗೆ ಎಡೆಮಾಡಿತು.

ಹಲವಾರು ದಶಕಗಳ ಸತತ ಅಧ್ಯಯನ ಮತ್ತು ಪ್ರಯೋಗಗಳ ಫಲ ಈ ‘ರಾಮನ್ ಪರಿಣಾಮ’. ಈ ಸಂಶೋಧನೆ ಎಷ್ಟು ಪ್ರಮುಖವಾಗಿತ್ತು ಎಂದರೆ 1987ರ ಹೊತ್ತಿಗೆ, ಈ ಸಂಶೋಧನೆಯನ್ನು ಆಧರಿಸಿ ಸುಮಾರು 5000 ಪ್ರಬಂಧಗಳು ಪ್ರಕಟವಾದವು! ಈ ಸಂಶೋಧನೆಗಾಗಿ 1929ರಲ್ಲಿಯೇ ತಮಗೆ ನೊಬೆಲ್ ಪಾರಿತೋಷಕ ಸಿಗುತ್ತದೆಂದು ರಾಮನ್‌ರು ನಿರೀಕ್ಷಿಸಿದ್ದರು. ಆದರೆ, 1930ರಲ್ಲಿ ಪಾರಿತೋಷಕವು ಅವರನ್ನು ಹುಡುಕಿಕೊಂಡು ಭಾರತಕ್ಕೆ ಬಂದಿತು.

ಪೂರ್ವ ನಿಯೋಜಿತ ಯೋಜನೆಯಂತೆ ಬೆಂಗಳೂರಿನಲ್ಲಿ ತಮ್ಮದೇ ಆದ ರಾಮನ್ ಸಂಶೋಧನಾ ಸಂಸ್ಥೆಯನ್ನು 1949ರಲ್ಲಿ ಆರಂಭಿಸಿದರು. ಕೊನೆಗಾಲದಲ್ಲಿ ಆರೋಗ್ಯ ಸರಿ ಇರಲಿಲ್ಲ. ಆದರೂ ಸಂಶೋಧನೆಗಳನ್ನು ಮುಂದುವರೆಸಿ ತಾವೇ ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ 1970ರ ನವೆಂಬರ್ ತಿಂಗಳ 11ರಂದು ಬೆಳಗಿನ ಜಾವದಲ್ಲಿ ನಿಧನರಾದರು. ಇಡೀ ಜಗತ್ತಿನ ವೈಜ್ಞಾನಿಕ ಲೋಕವೇ ಅಂದು ಶೋಕಿಸಿತು. ಅವರ ಪಾರ್ಥಿವ ಶರೀರವನ್ನು ರಾಮನ್ ಸಂಸ್ಥೆಯ ಕಟ್ಟಡದ ಮುಂದಿನ ಬಯಲಿನಲ್ಲಿಯೇ ದಹನಗೊಳಿಸಲಾಯಿತು.

– ಎಂ.ಎಚ್. ಸವದತ್ತಿ,

ವಿಜ್ಞಾನ ಶಿಕ್ಷಕರು, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!