ರಾಮನಗರ:- ಜಿಲ್ಲೆಯ ಹಾರೋಹಳ್ಳಿ ತಾಲೂಕಿನಿ ಹಳ್ಳಿಕೆರೆದೊಡ್ಡಿಯಲ್ಲಿ ತೋಟಕ್ಕೆ ತೆರಳಿದ ರೈತನ ಮೇಲೆ ಒಂಟಿ ಸಲಗ ದಾಳಿ ಮಾಡಿದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರವತ್ನಾಲ್ಕು ವರ್ಷದ ತಿಮ್ಮಯ್ಯ, ಉರ್ಫ್ ತಿಮ್ಮಪ್ಪ ಆನೆ ತುಳಿತದಿಂದ ಬರ್ಬರವಾಗಿ ಸಾವಾಗೀಡಾಗಿದ್ದಾನೆ. ತಲೆಯ ಮೇಲೆಯೇ ಕಾಲಿನಿಂದ ತುಳಿದ ಪರಿಣಾಮ ತಲೆ ಬುರೆಡೆ ಒಡೆದುಹೋಗಿ ಮುಖವೂ ಗುರುತು ಸಿಗಲಾರದ ರೀತಿ ಮರಣಹೊಂದಿದ್ದಾನೆ.
ಇನ್ನು ಐದು ಗಂಟೆ ಸುಮಾರಿಗೆ ನೀರು ಬಿಡಲು ತೆರಳಿದ್ದ ತಂದೆ, ಇನ್ನೂ ಯಾಕೆ ಮನೆಗೆ ಬಂದಿಲ್ಲ ಎಂದು ನೋಡಲು ಹೋದಾಗ ತೋಟದಲ್ಲೇ ತಂದೆ ಶವ ಬಿದ್ದಿದ್ದು ಕಂಡು ಮಗನಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಹಲವು ದಿನಗಳಿಂದಲೂ ಆನೆಗಳ ಗುಂಪು ಊರಿನ ಸಮೀಪ ಬರುತ್ತಿದ್ದು, ಕೂಡಲೇ ಅವುಗಳನ್ನು ಕಾಡಿಗೆ ಓಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರೆನ್ನಲಾಗಿದೆ. ಅಲ್ಲದೆ ಕಾಡಾನೆಗಳ ಗುಂಪು ಹಗಲಿನಲ್ಲಿಯೂ ಊರು ಪ್ರವೇಶ ಮಾಡುತ್ತಿದ್ದು, ಸೂಕ್ತ ಭದ್ರತೆ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.