ಅಧಿಕೃತ ಬಿಡುಗಡೆಗೂ ಮುನ್ನವೇ ‘ರಾಮಾಯಣ’ ಟ್ರೈಲರ್ ಲೀಕ್ ಆಗಿದ್ದು, ಸಿನಿಮಾ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಪ್ರದರ್ಶಿಸಲಾದ ಟ್ರೈಲರ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾಗಿದ್ದು, ರಾವಣನಾಗಿ ಯಶ್ ಅವರ ರೌದ್ರ ಎಂಟ್ರಿಯೇ ಟ್ರೈಲರ್‌ನ ಹೈಲೈಟ್ ಆಗಿದೆ.
ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿರುವ ಕಾರಣ ವಿಡಿಯೋ ಗುಣಮಟ್ಟ ಕಡಿಮೆಯಿದ್ದರೂ, ಚಿತ್ರದ ದೃಶ್ಯ ವೈಭವ ಮತ್ತು ನಿರ್ಮಾಣ ಮೌಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಘರ್ಜಿಸುತ್ತಿರುವ ಸಿಂಹದ ಎದುರು ನಿಂತು ಅದನ್ನೇ ತನ್ನ ಪ್ರಭಾವದಿಂದ ಮೌನಗೊಳಿಸುವ ರಾವಣನ ದೃಶ್ಯ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಜೊತೆಗೆ ಬಾಹುಗಳನ್ನು ಚಾಚಿ ಸಂಭಾಷಣೆ ಹೇಳುವ ಯಶ್ ಅವರ ಮಾಸ್ ಅವತಾರವೂ ಭಾರೀ ಮೆಚ್ಚುಗೆ ಪಡೆಯುತ್ತಿದೆ.
ಟ್ರೈಲರ್‌ನಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಶೂರ್ಪಣಖಿಯಾಗಿ ರಕುಲ್ ಪ್ರೀತ್ ಸಿಂಗ್, ಹನುಮಂತ ಸೇರಿದಂತೆ ಹಲವು ಪ್ರಮುಖ ಪಾತ್ರಗಳ ಝಲಕ್ ನೀಡಲಾಗಿದೆ. ರಾಮನ ವನವಾಸ, ಸೀತಾ ಕಲ್ಯಾಣ, ಶೂರ್ಪಣಖಿಯ ಮೂಗು ಕತ್ತರಿಸುವ ಪ್ರಸಂಗ, ದಶರಥ-ರಾಮ ಭಾವನಾತ್ಮಕ ಕ್ಷಣಗಳು ಸೇರಿದಂತೆ ಮಹಾಕಾವ್ಯದ ಪ್ರಮುಖ ಅಧ್ಯಾಯಗಳನ್ನು ಚಿತ್ರತಂಡ ಟ್ರೈಲರ್‌ನಲ್ಲಿ ಅನಾವರಣಗೊಳಿಸಿದೆ.
ಚಿತ್ರತಂಡ ಜುಲೈ 30ರಂದು ಬೆಳಿಗ್ಗೆ 4:15ಕ್ಕೆ ಅಧಿಕೃತ ಟ್ರೈಲರ್ ಬಿಡುಗಡೆ ಮಾಡಲಿದ್ದು, ಲೀಕ್ ವಿಡಿಯೋ ಬಳಿಕ ಅದರ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಸುಮಾರು ₹2,000 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಚಿತ್ರಕ್ಕೆ ನಿತೇಶ್ ತಿವಾರಿ ನಿರ್ದೇಶನವಿದ್ದು, ನಮಿತ್ ಮಲ್ಹೋತ್ರಾ ನಿರ್ಮಾಪಕರಾಗಿದ್ದಾರೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್ ಹಾಗೂ ಕಾಜಲ್ ಅಗರ್ವಾಲ್ ಅಭಿನಯಿಸಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗ ಮುಂದಿನ ವರ್ಷದ ನವೆಂಬರ್‌ನಲ್ಲಿ ತೆರೆಗೆ ಬರಲಿದೆ.



