ಬೆಂಗಳೂರು:– ಕರ್ನಾಟಕ ಸಿಎಂ ಬದಲಾವಣೆ ಕುರಿತು ರಣದೀಪ್ ಸುರ್ಜೇವಾಲ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಸುರ್ಜೇವಾಲ, ಯಾರೂ ಪಕ್ಷದ ಚೌಕಟ್ಟು ಮೀರಬಾರದು ಅಂತಾ ಸೂಚನೆ ಕೊಟ್ಟಿದ್ದರೂ ಕೆಲವರು ಅದನ್ನು ಮೀರಿ ಮಾತನಾಡಿದ್ದಾರೆ.
ಈ ಬಗ್ಗೆ ಗಮನ ಹರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಸುರ್ಜೇವಾಲ ತಿಳಿಸಿದ್ದಾರೆ. ಮತಗಳ್ಳತನ ಆರೋಪದ ಬಗ್ಗೆಯೂ ಈ ವೇಳೆ ಸುರ್ಜೇವಾಲ ಮಾತನಾಡಿದ್ದು, ಮತಗಳ್ಳತನ ಮಹದೇವಪುರ ಮತ್ತು ಆಳಂದ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲೂ ನಡೆದಿದೆ. ಮಹಾರಾಷ್ಟ್ರದಲ್ಲಿ ಮತಗಳ್ಳತನ ಆಗಿರುವ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಸಂವಿಧಾನ ನೀಡಿದ ಹಕ್ಕು ಕಿತ್ತುಕೊಳ್ತಿರುವ ಕಾರಣ ಕಾಂಗ್ರೆಸ್ ‘ವೋಟ್ ಚೋರಿ’ ಅಭಿಯಾನ ನಡೆಸುತ್ತಿದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಇನ್ನು ರಾಜ್ಯ ಕಾಂಗ್ರೆಸ್ ವತಿಯಿಂದಲೂ ಬೆಂಗಳೂರಿನ ಪುಲಕೇಶಿ ನಗರದಲ್ಲಿ ‘ವೋಟ್ ಚೋರಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.



