ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಚುನಾವಣೆಗೆ ಕೊಪ್ಪಳ ಹಾಗೂ ಹಾವೇರಿ ಮತಕ್ಷೇತ್ರಕ್ಕೆ ರಾಣಿ ಚೆನ್ನಮ್ಮ ಪಾರ್ಟಿಯ ಅರ್ಹ ಅಭ್ಯರ್ಥಿಗಳು ಸ್ಪರ್ಧಿಸಿ ಪ್ರಬಲ ಸ್ಪರ್ಧೆ ನೀಡಲಿದ್ದಾರೆ ಎಂದು ರಾಣಿ ಚೆನ್ನಮ್ಮ ಪಾರ್ಟಿ ಪ್ರಾದೇಶಿಕ ಪಕ್ಷದ ಸಂಸ್ಥಾಪಕ ಎಂ.ಬಿ. ದೇಸಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬ್ರಿಟಿಷರ ಆಧೀನದಲ್ಲಿದ್ದ ಭಾರತವನ್ನು ಸ್ವತಂತ್ರಗೊಳಿಸಲು ಹೋರಾಟ ನಡೆಸಿದವರಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ಅಗ್ರಗಣ್ಯ ವೀರಮಹಿಳೆ. ಪ್ರಪ್ರಥಮ ಸ್ವಾತಂತ್ರ್ಯ ಕಹಳೆ ಊದಿದ ದಿಟ್ಟ ಸಾಹಸಿ ಮಹಿಳೆ ವೀರಶೈವ ಲಿಂಗಾಯತ ಸಮುದಾಯದಲ್ಲಿ ಜನಿಸಿದ ವೀರರಾಣಿ ಕಿತ್ತೂರ ಚೆನ್ನಮ್ಮಳ ಸಾಹಸಗಾಥೆ ಬಹುದೊಡ್ಡದು. ಇಂತಹ ತಾಯಿಯ ಹೆಸರಿನಲ್ಲಿ ಸ್ಥಾಪಿತವಾದ ಜಾತ್ಯಾತೀತ ಪ್ರಾದೇಶಿಕ ರಾಜಕೀಯ ಪಕ್ಷವಾದ ರಾಣಿ ಚೆನ್ನಮ್ಮ ಪಾರ್ಟಿ ಈ ಚುನಾವಣೆಗೆ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದಿದ್ದಾರೆ.
ಲೋಕಸಭಾ ಕ್ಷೇತ್ರಗಳಾದ ಹಾವೇರಿ, ಕೊಪ್ಪಳ, ಬಿಜಾಪೂರ, ಬಾಗಲಕೋಟಿ, ಬೀದರ, ಗುಲಬರ್ಗಾ, ಧಾರವಾಡ, ಬೆಳಗಾವಿ, ಚಿಕ್ಕೊಡಿ ಕ್ಷೇತ್ರದಲ್ಲಿ ರಾಣಿ ಚೆನ್ನಮ್ಮ ಪಾರ್ಟಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು ಆಯಾ ಕ್ಷೇತ್ರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಗಣ್ಯರು, ಮುಖಂಡರು ಸೂಚಿಸುವ ಅರ್ಹ ಅಭ್ಯರ್ಥಿಗಳಿಗೆ ಬಿಫಾರ್ಮ ನೀಡಲು ಪಾರ್ಟಿ ನಿರ್ಧರಿಸಿದೆ. ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿAದ ಪರಾಭವಗೊಂಡಿರುವ, ರಾಷ್ಟ್ರೀಯ/ಪಕ್ಷೇತ್ರತರ ಅಭ್ಯರ್ಥಿಗಳಿಗೂ ಬಿಫಾರ್ಮ ನೀಡಲು ಪಾರ್ಟಿ ಚಿಂತನೆ ನಡೆಸಿದೆ ಎಂದು ಎಂ.ಬಿ. ದೇಸಾಯಿ ತಿಳಿಸಿದ್ದಾರೆ.
ರಾಣಿ ಚೆನ್ನಮ್ಮ ಪಾರ್ಟಿಯ ತತ್ವ-ಸಿದ್ಧಾಂತಗಳನ್ನು ಪಾಲಿಸುವ, ಚುನಾವಣೆಗೆ ಸ್ಪರ್ಧಿಸಲಿಚ್ಛಿಸುವ ಯೋಗ್ಯ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ-9980383723/ 7483792645 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.



