ತಂದೆ, ತಾಯಿ ಸೆಕ್ಸ್ ಬಗ್ಗೆ ಅಸಭ್ಯವಾಗಿ ಮಾತನಾಡಿ ಹಲವರು ಕೆಂಗಣೀಗೆ ಗುರಿಯಾಗಿದ್ದ ಖ್ಯಾತ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಹಾಗೂ ಸ್ನೇಹಿತರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ನಿಮಗೆ ನಾಚಿಕೆ ಆಗಬೇಕು. ನೀವು ಬಳಸಿರುವ ಪದ ಅಸಭ್ಯ, ಅಶ್ಲೀಲ ಪದವಲ್ಲದೇ ಮತ್ತೇನು ಎಂದು ಕೋರ್ಟ್ ತರಾಟೆ ತೆಗೆದುಕೊಂಡಿದೆ.
ತನ್ನ ಮನಸ್ಸಿನಲ್ಲಿರುವ ಕೆಟ್ಟದ್ದನ್ನು ಯೂಟ್ಯೂಬ್‌ನಲ್ಲಿ ರಣವೀರ್ ಹೊರ ಹಾಕಿದ್ದಾರೆ. ಸಮಾಜಕ್ಕೆ ತನ್ನದೇ ಆದ ಮೌಲ್ಯಗಳಿವೆ. ಆ ಮೌಲ್ಯಗಳನ್ನು ನೀವು ಗೌರವಿಸಬೇಕು. ಸಮಾಜವನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ನಿಯಮಗಳ ವಿರುದ್ಧ ಮಾತನಾಡುವ ಲೈಸೆನ್ಸ್ ಅನ್ನು ಯಾರಿಗೂ ಕೊಟ್ಟಿಲ್ಲ. ನೀವು ಬಳಸಿರುವ ಪದಗಳು, ಹೆಣ್ಣು ಮಗಳು, ತಂದೆ, ತಾಯಿ, ಸೋದರಿಯರು, ಇಡೀ ಸಮಾಜ ನಾಚಿಕೆ ಪಡುವಂಥದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ರಣವೀರ್ ಅಲಹಾಬಾದಿಯಾ ಭಾಗಿಯಾಗಿದ್ದ ಇಂಡಿಯಾ ಗಾಟ್ ಲ್ಯಾಟೆಂಟ್ ಕಾರ್ಯಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಇದು ಫನ್ನಿ ಕಾರ್ಯಕ್ರಮ ಅಲ್ಲ. ರಣವೀರ್ ಅಲಹಾಬಾದಿಯಾ ಸಂಪೂರ್ಣ ಬೇಜಾವಬ್ದಾರಿ ತನದಿಂದ ವರ್ತಿಸಿದ್ದೀರಿ. ಮುಂದಿನ ಆದೇಶದವರೆಗೂ ರಣವೀರ್ ಅಲಹಾಬಾದಿಯಾ, ಸ್ನೇಹಿತರು ಯಾವುದೇ ಕಾರ್ಯಕ್ರಮಗಳನ್ನು ಮಾಡಬಾರದು. ಇಂಡಿಯಾ ಗಾಟ್ ಲ್ಯಾಟೆಂಟ್ ಕಾರ್ಯಕ್ರಮ ಪ್ರಸಾರವಾಗಬಾರದು ಎಂದು ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿದೆ.
ರಣ್ವೀರ್ ಅಲ್ಹಾಬಾದಿಯಾರ ವಕೀಲರ ವಾದ ಆಲಿಸಿದ ಸುಪ್ರೀಂಕೋರ್ಟ್, ರಣ್ವೀರ್ ಅನ್ನು ಬಂಧಿಸದಿರುವಂತೆ ಸೂಚಿಸಿದೆ. ಆದರೆ ರಣ್ವೀರ್, ಪೊಲೀಸರ ತನಿಖೆಗೆ ಸೂಕ್ತವಾಗಿ ಸಹಕರಿಸಿದರೆ ಮಾತ್ರವೇ ಅವರನ್ನು ಬಂಧಿಸುವಂತಿಲ್ಲ ಎಂದಿದೆ. ಅಸ್ಸಾಂ, ಮುಂಬೈ ಪೊಲೀಸರು ರಣ್ವೀರ್ ಅನ್ನು ಬಂಧಿಸುವಂತಿಲ್ಲ ಎಂದಿರುವ ಸುಪ್ರೀಂ ನ್ಯಾಯಮೂರ್ತಿಗಳು, ಒಂದೊಮ್ಮೆ ಇದೇ ವಿಷಯದ ಮೇಲೆ ಇನ್ನೊಂದು ಪ್ರಕರಣ ದಾಖಲಾದರೂ ಸಹ ರಣ್ವೀರ್ ಅನ್ನು ಬಂಧಿಸುವಂತಿಲ್ಲ ಎಂದಿದೆ.