‘45’ ಸಿನಿಮಾವನ್ನು ಹಿಂದಿ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ನಟ ಶಿವರಾಜ್ಕುಮಾರ್ ಮುಂಬೈನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಶಿವಣ್ಣ, ಬಾಲಿವುಡ್ ಸಿನಿಮಾ ‘ಧುರಂಧರ್’ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರಣವೀರ್ ಸಿಂಗ್ ಹಾಗೂ ಅಕ್ಷಯ್ ಖನ್ನಾ ಅಭಿನಯದ ‘ಧುರಂಧರ್’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು, ಆ ಸಿನಿಮಾದ ಮೇಕಿಂಗ್ ಮತ್ತು ಎಮೋಷನ್ ಬಗ್ಗೆ ಶಿವರಾಜ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ‘ಎಲ್ಲರ ನಟನೆ ಚೆನ್ನಾಗಿದೆ. ಅಕ್ಷಯ್ ಖನ್ನಾ ಅವರ ಪಾತ್ರಕ್ಕೆ ಏನು ಬೇಕಾದರೂ ಮಾಡುವ ಅವಕಾಶ ಇದೆ. ಆದರೆ ರಣವೀರ್ ಸಿಂಗ್ ಮಾಡಿದ ಪಾತ್ರ ಅಷ್ಟು ಸುಲಭವಲ್ಲ. ಪಾತ್ರಕ್ಕೆ ಬೇಕಾದ ಸೂಕ್ಷ್ಮ ಅಭಿನಯವನ್ನು ಅವರು ಅದ್ಭುತವಾಗಿ ನೀಡಿದ್ದಾರೆ’ ಎಂದರು.
ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾತನಾಡಿದ ಶಿವಣ್ಣ, ಕೇವಲ ಪಾತ್ರಕ್ಕಾಗಿ ಅಲ್ಲ, ಜನರ ಹೃದಯ ತಲುಪುವಂತಹ ಕಮರ್ಷಿಯಲ್ ಸಿನಿಮಾ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ‘ನನ್ನನ್ನು ಜನರು ನಟನಾಗಿ ಅಲ್ಲ, ಪಾತ್ರವಾಗಿ ನೋಡಬೇಕು. ಸಿನಿಮಾ ಭಾರತೀಯ ಸಂಸ್ಕೃತಿಯ ಭಾಗವಾಗಿರಬೇಕು’ ಎಂದಿದ್ದಾರೆ.
ಕನ್ನಡ ಚಿತ್ರರಂಗವನ್ನು ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳು ಬಾಲಿವುಡ್ ಮಟ್ಟಕ್ಕೆ ಕೊಂಡೊಯ್ದಿವೆ ಎಂಬುದನ್ನೂ ಶಿವಣ್ಣ ಸ್ಮರಿಸಿದರು. ‘ಅವರು ಧೈರ್ಯ ತೋರಿಸಿದ್ದರಿಂದಲೇ ಇಂದು ಕನ್ನಡ ಸಿನಿಮಾಗಳ ಬಗ್ಗೆ ಹಿಂದಿ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಈಗ ನಾವು ‘45’ ತಂಡದವರು ಬಂದಿದ್ದೇವೆ. ಏನಾಗುತ್ತದೋ ನೋಡೋಣ’ ಎಂದು ಹೇಳಿದರು.
ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾದಲ್ಲಿ ಉಪೇಂದ್ರ, ರಾಜ್ ಬಿ. ಶೆಟ್ಟಿ ಹಾಗೂ ಶಿವರಾಜ್ಕುಮಾರ್ ಒಟ್ಟಾಗಿ ಅಭಿನಯಿಸಿದ್ದು, ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಕನ್ನಡದಲ್ಲಿ ಬಿಡುಗಡೆಯಾದ ಬಳಿಕ, ಸಿನಿಮಾ ಬೇರೆ ಭಾಷೆಗಳಿಗೂ ವಿಸ್ತರಿಸುತ್ತಿರುವುದರಿಂದ ಶಿವಣ್ಣ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.



