ಗೋಲ್ಡ್ ಸ್ಮಗ್ಮಿಂಗ್ ಕೇಸ್ ನಲ್ಲಿ ಪೊಲೀಸರ ಕೈಗೆ ಸಿಕ್ಕಿರುವ ರನ್ಯಾ ರಾವ್ ಕೇಸ್ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಬಗೆದಷ್ಟು ಜಾಲಗಳು ಹೊರ ಬೀಳುತ್ತಿವೆ. ಇದೀಗ 2022 ರಲ್ಲಿ ವಿದೇಶ ಪ್ರಯಾಣಕ್ಕೆ ಹೋಗದ ರನ್ಯಾ ರಾವ್ 2023 ರ ಜೂನ್ ಬಳಿಕ 52 ಬಾರಿ ದುಬೈ ಪ್ರಯಾಣ ಮಾಡಿದ್ದ ಸ್ಫೋಟಕ ಮಾಹಿತಿ ಕಂದಾಯ ಗುಪ್ತಚರ ನಿರ್ದೇಶನಾಲಯದ ತನಿಖೆಯಿಂದ ಬಯಲಾಗಿದೆ.
2021 ರಿಂದ 2025 ರವರೆಗೆ ರನ್ಯಾ ರಾವ್ ವಿದೇಶಕ್ಕೆ ಹೋದ ಲೆಕ್ಕ ಇದೀಗ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ಕೈಗೆ ಸಿಕ್ಕಿದೆ. 2021 ರಲ್ಲಿ ಒಮ್ಮೆ ಕುಟುಂಬದ ಜೊತೆ ವಿದೇಶಕ್ಕೆ ಹೋಗಿದ್ದ ರನ್ಯಾರಾವ್ 2023 ಜೂನ್ ಬಳಿಕ ದುಬೈಗೆ ಸುಮಾರಿ 52 ಬಾರಿ ಹೋಗಿ ಬಂದಿದ್ದಾರೆ.
ಮಾರ್ಚ್ 3 ರಂದು ದುಬೈನಿಂದ ಬರುವಾಗ 14 ಕೆಜಿ ಚಿನ್ನವನ್ನು ರನ್ಯಾ ತಂದಿದ್ದಳು. ಒಂದು ಬಾರಿ ಇಷ್ಟು ಪ್ರಮಾಣದ ಚಿನ್ನವನ್ನು ತಂದ ಈಕೆ 45 ಬಾರಿ ಒಂದೇ ದಿನ ಹೋಗಿ ಬಂದಿದ್ದಾಳೆ.
ಇನ್ನೂ ವಿಚಾರಣೆ ವೇಳೆ ರನ್ಯಾ ಹಲವು ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾಳೆ. 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ ಎಂದು ಡಿಆರ್‌ಐ ಅಧಿಕಾರಿಗಳ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಳು. ಮಾರ್ಚ್ 1ರಂದು ವಿದೇಶಿ ನಂಬರ್‌ನಿಂದ ನನಗೆ ಕರೆ ಬಂದಿತ್ತು. ಚಿನ್ನ ತಂದು ಡೆಲಿವರಿ ಮಾಡಬೇಕು ಎಂಬ ಸೂಚನೆ ಆ ಕರೆಯಲ್ಲಿ ಇತ್ತು. ನಂತರ ಟಿಕೆಟ್ ಬುಕ್ ಮಾಡಿಕೊಂಡು ಮಾರ್ಚ್ 2ರಂದು ದುಬೈಗೆ ಹೋದೆ.
ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರ ಗೇಟ್ ಎ ಬಳಿ ಬರಲು ಸೂಚನೆ ಸಿಕ್ಕಿತ್ತು. 6 ಅಡಿ ಎತ್ತರದ ವ್ಯಕ್ತಿಯೊಬ್ಬ ಬಂದು ಚಿನ್ನವಿದ್ದ ಎರಡು ಬಾಕ್ಸ್ ನೀಡಿದ. ಬಂಗಾರ ಬಚ್ಚಿಡಲು ವಿಮಾನ ನಿಲ್ದಾಣದಲ್ಲೇ ಬ್ಯಾಡೇಜ್ ಮತ್ತು ಕತ್ತರಿ ಖರೀದಿಸಿದೆ.
ವಾಶ್‌ರೂಂಗೆ ಹೋಗಿ ಮೈಗೆ ಚಿನ್ನದ ಗಟ್ಟಿಗಳನ್ನು ಅಂಟಿಸಿಕೊಂಡು ಬಂದೆ. ಹೇಗೆ ಕಳ್ಳಸಾಗಣೆ ಮಾಡಬೇಕು ಎಂಬುದನ್ನು ಯೂಟ್ಯೂಬ್ ನೋಡಿ ಕಲಿತೆ. ಹಿಂದೆಂದೂ ನಾನು ಚಿನ್ನ ಕಳ್ಳಸಾಗಣೆ ಮಾಡಿರಲಿಲ್ಲ. ಮೊದಲ ಬಾರಿಗೆ ಕಳ್ಳ ಸಾಗಾಣಿಕೆ ಮಾಡಿದ್ದೆ ಎಂದು ರನ್ಯಾ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾಳೆ.
ಬೆಂಗಳೂರು ಏರ್‌ಪೋರ್ಟ್ ಟೋಲ್ ಬಳಿ ಬರಲು ನನಗೆ ಸೂಚನೆ ಸಿಕ್ಕಿತ್ತು. ಸರ್ವೀಸ್ ರೋಡ್‌ನಲ್ಲಿ ನಿಲ್ಲಿಸಿದ ಆಟೋದಲ್ಲಿ ಚಿನ್ನ ಇಟ್ಟು ಹೋಗಲು ತಿಳಿಸಿದ್ದರು. ನನ್ನ ಜೊತೆ ಮಾತಾಡಿದ್ದು ಯಾರೆಂದು ಗೊತ್ತಿಲ್ಲ. ಭಾಷೆ ನೋಡಿದರೆ ಆ ವ್ಯಕ್ತಿ ಆಫ್ರಿಕನ್ ಅಮೆರಿಕನ್ ಇರಬಹುದು ಎಂದು ರನ್ಯಾ ಹೇಳಿದ್ದಾಳೆ.