ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್ ಅವರಿಗೆ ನೋಟಿಸ್ ಜಾರಿಯಾಗಿದೆ.
ರಾಸಲೀಲೆ ಪ್ರಕರಣದ ಬೆನ್ನಲ್ಲೇ ಇದೀಗ ರನ್ಯಾ ರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರಿ ವಾಹನ ದುರ್ಬಳಕೆ ಆರೋಪದಲ್ಲಿ ರಾಮಚಂದ್ರರಾವ್ ವಿರುದ್ಧ ಚಾರ್ಜ್ ಮೆಮೊ ನೀಡಲಾಗಿತ್ತು. ಡಿಜಿಪಿ ರಾಮಚಂದ್ರರಾವ್ ಅವರ ಪುತ್ರಿ ರನ್ಯಾ ರಾವ್ ಸರ್ಕಾರಿ ವಾಹನವನ್ನು ಅನಧಿಕೃತವಾಗಿ ಬಳಸಿದ್ದಾರೆನ್ನುವ ಆರೋಪ ಕೇಳಿಬಂದಿತ್ತು.
ಇನ್ನೂ, ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿ ಇಲಾಖಾ ತನಿಖೆಗೆ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಐಜಿಪಿಯಾಗಿದ್ದ ಅವಧಿಯಲ್ಲಿ ಕಚೇರಿಯಲ್ಲಿ ಸಮವಸ್ತ್ರದಲ್ಲಿಯೇ ರಾಸಲೀಲೆ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಡಿಆರ್‌ಐ ಅಧಿಕಾರಿಗಳು ರಾಮಚಂದ್ರರಾವ್ ಅವರಿಗೆ ನೋಟಿಸ್ ನೀಡಿ ಮ್ಯಾರಥಾನ್ ವಿಚಾರಣೆ ನಡೆಸಿದ್ದರು.
ವಿಚಾರಣೆಯಲ್ಲಿ ರನ್ಯಾ ರಾವ್ ಹಾಗೂ ರಾಮಚಂದ್ರರಾವ್ ನಡುವಿನ ಸಂಬಂಧ, ಚಿನ್ನ ಸಾಗಾಟಕ್ಕೆ ಸಹಾಯ ಮಾಡಲಾಗಿತ್ತೇ?, ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಂಡಿದ್ದಾರೇ?, ಹಾಗೂ ಕಳೆದ ಎರಡು ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ತೆರಳಿ ಬಂದಿರುವ ವಿಚಾರಗಳ ಕುರಿತು ಸವಿವರವಾಗಿ ಪ್ರಶ್ನಿಸಲಾಗಿದೆ.



