ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲಿಸಾ ಸದ್ಯ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾಳೆ. ನಿರ್ದೇಶಕ ಸನೋಜ್ ಮಿಶ್ರಾ ಮೊನಾಲಿಸಾಳನ್ನು ಬಾಲಿವುಡ್ ಗೆ ಪರಿಚಯ ಮಾಡಿಸಿದ್ದಾರೆ. ಇದೀಗ ನಿರ್ದೇಶಕ ಸನೋಜ್ ಮಿಶ್ರಾ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ಸನೋಜ್ ಮಿಶ್ರಾ ಮೇಲೆ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಇದೀಗ ಅರೆಸ್ಟ್ ಮಾಡಲಾಗಿದೆ. ಸನೋಜ್ ಮಿಶ್ರಾ ಮೇಲೆ ಈ ಮೊದಲೇ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಯುವತಿ ನೀಡಿದ ದೂರಿನ ಮೇರೆಗೆ ಅರೆಸ್ಟ್ ಮಾಡಲಾಗಿದೆ.
ಝಾನ್ಸಿ ಮೂಲದ ಯುವತಿಯೊಬ್ಬಳು 2020ರಲ್ಲಿ ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಸನೋಜ್ ಮಿಶ್ರಾ ಅವರಿಗೆ ಪರಿಚಯವಾಗಿದ್ದಾಳೆ. ಬಳಿಕ ಫೋನ್ ನಂಬರ್ ಪಡೆದು ಇಬ್ಬರು ಮಾತುಕತೆ ನಡೆಸಿದ್ದಾರೆ. 2021ರ ಜೂನ್ 17ರಂದು ಝಾನ್ಸಿ ರೈಲು ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡುವಂತೆ ಸನೋಜ್ ಮಿಶ್ರಾ ಕೇಳಿಕೊಂಡಿದ್ದರು. ಆದರೆ ಆ ಯುವತಿ ನಿರಾಕರಿಸಿದಾಗ, ಒಂದು ವೇಳೆ ಭೇಟಿ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸನೋಜ್ ಬೆದರಿಕೆ ಹಾಕಿದ್ದರು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಭಯದಿಂದ ಯುವತಿ ಮರುದಿನ, ಅಂದರೆ 2021ರ ಜೂನ್ 18ರಂದು ಸನೋಜ್ ಅವರನ್ನು ಭೇಟಿ ಮಾಡಿದ್ದರು. ಆಕೆಯನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿ ಮತ್ತು ಬರಿಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸೆಗಲಾಯಿತು. ಆಕೆಯ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಕೊಂಡು ಸನೋಜ್ ಮಿಶ್ರಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.
ಆ ಬಳಿಕ ಹಲವು ಬಾರಿ ಆಕೆಯ ಮೇಲೆ ಸನೋಜ್ ಮಿಶ್ರಾ ದೌರ್ಜನ್ಯ ನಡೆಸಿದ್ದಾರೆ. ಮದುವೆ ಆಗುವುದಾಗಿ ಹಾಗೂ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಈ ರೀತಿ ಮಾಡಲಾಗಿದೆ ಎಂದು ಯುವತಿ ದೂರು ನೀಡಿದ್ದು ಯುವತಿ ನೀಡಿದ ದೂರಿನ ಮೇರೆಗೆ ಇದೀಗ ದೆಹಲಿ ಪೊಲೀಸರು ಬಂಧಿಸಿದ್ದಾರೆ.