ಹಾಸನ:- ಅಪ್ರಾಪ್ತ ಬುದ್ಧಿಮಾಂದ್ಯೆ ಮೇಲೆ ಎರಡು ಮಕ್ಕಳ ತಂದೆಯೋರ್ವ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಜರುಗಿದೆ.
ಪಕ್ಕದ ಮನೆಯ ನಿವಾಸಿಯಿಂದಲೇ ಈ ಹೀನಕೃತ್ಯ ನಡೆದಿದೆ. ಮಂಗಳವಾರ ಬಾಲಕಿಯ ಮನೆಯವರು ಸಂಬಂಧಿಕರೊಬ್ಬರ ಬೀಗರ ಔತಣ ಕಾರ್ಯಕ್ರಮಕ್ಕೆ ಹೋಗಿದ್ದರು. ಬಾಲಕಿ ಒಬ್ಬಳೇ ಮನೆಯಲ್ಲಿದ್ದಳು. ಇದೇ ಸಮಯಕ್ಕಾಗಿ ಕಾದಿದ್ದ ಆರೋಪಿ, ಚಾಕೊಲೆಟ್ ಕೊಡುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸಂಜೆ ವೇಳೆಗೆ ಪೋಷಕರು ಬಂದಾಗ ಬಾಲಕಿಯ ವರ್ತನೆ ಬದಲಾಗಿತ್ತು. ಒಂದೇ ಸಮನೆ ಅಳಲಾರಂಭಿಸಿದ್ದಾಳೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸಿದಾಗ ಅತ್ಯಾಚಾರ ನಡೆದಿದೆ ಎಂಬುದು ದೃಢವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಆರೋಪಿ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾನೆ. ದೂರು ಆಧರಿಸಿ ತನಿಖೆ ಕೈಗೊಂಡಿರುವ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.