ಧಾರವಾಡದಲ್ಲಿ ರಾಷ್ಟ್ರೀಯ ಲೋಕ ಅದಾಲತ್ 73,811 ಪ್ರಕರಣಗಳು ಇತ್ಯರ್ಥ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಡಿ.14ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ, ರಾಜೀ ಆಗಬಹುದಾದ 17,596  ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 12,551 ಪ್ರಕರಣಗಳನ್ನು ಹಾಗೂ 63,013 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 61,260 ಪ್ರಕರಣಗಳನ್ನು ಸೇರಿ ಒಟ್ಟು 73,811 ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸಲಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿಕೊಂಡ ಒಟ್ಟು ಮೊತ್ತ 8,09,37,468 ರೂಪಾಯಿಗಳು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿಕೊಂಡ ಒಟ್ಟು ಮೊತ್ತ 54,59,56,204 ರೂಪಾಯಿಗಳು.

Advertisement

ಧಾರವಾಡ ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿದ್ದ ವೈವಾಹಿಕ, ಜೀವನಾಂಶ ಪ್ರಕರಣಗಳಲ್ಲಿ ನಡೆದ ರಾಜೀ ಸಂಧಾನದ ಪರವಾಗಿ 8 ಪ್ರಕರಣಗಳು ಯಶಸ್ವಿಯಾಗಿ ದಂಪತಿಗಳು ಒಂದಾಗಿದ್ದಾರೆ.

31 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ರಾಜೀ ಪ್ರಕರಣದ ಮೂಲಕ ತಮ್ಮ ವಿವಾದಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ. ರಮಾ ಹಾಗೂ ಧಾರವಾಡ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ, ನ್ಯಾಯವಾದಿಗಳಿಗೆ, ಬ್ಯಾಂಕ್, ಸಹಕಾರಿ ಸಂಘ, ಹಣಕಾಸು ಸಂಸ್ಥೆ, ವಿಮಾ ಕಂಪನಿಗಳು ಅವುಗಳ ನ್ಯಾಯವಾದಿಗಳಿಗೆ, ಅಭಿಯೋಜನೆಯ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಕಕ್ಷಿದಾರರಿಗೆ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪರವಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಕೃತಜ್ಞತೆ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here