ರಾಧಾಕೃಷ್ಣ ನಗರದಲ್ಲಿ ಸಮಾನತೆಯ ರಥಯಾತ್ರೆಗೆ ಅಭಿಮಾನದ ಸ್ವಾಗತ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ಸಮಾನತೆ ಮಂದಿರ ಮಹಾಸಭಾ ವತಿಯಿಂದ ಅನಿಲ ಪಿ.ಮೆಣಸಿನಕಾಯಿ ಅವರ ನೇತೃತ್ವದಲ್ಲಿ ಎಪ್ರಿಲ್ 19ರಂದು ಮಾಜಿ ಸಚಿವರು, ಶಾಸಕ ಸಿ.ಸಿ. ಪಾಟೀಲ. ಮಾಜಿ ಸಚಿವ ಬಿ. ಶ್ರೀರಾಮುಲು, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ, ಶಾಸಕರು, ನಗರಸಭೆ ಸದಸ್ಯರ ಉಪಸ್ಥಿತಿಯಲ್ಲಿ ಆರಂಭಗೊಂಡ ಸಮಾನತೆ ರಥಯಾತ್ರೆ ಗದಗ ನಗರದ ರಾಧಾಕೃಷ್ಣ ಕಾಲೋನಿಗೆ ಆಗಮಿಸಿದಾಗ ಮಾತೆಯರು, ಗುರು-ಹಿರಿಯರು ಅಭಿಮಾನದಿಂದ ಬರಮಾಡಿಕೊಂಡರು.

Advertisement

ರಾಧಾಕೃಷ್ಣ ನಗರದ ಆರಾಧ್ಯದೈವ ಆಂಜನೇಯಸ್ವಾಮಿ ದೇವಸ್ಥಾನದ ಎದುರಿಗೆ ಸಮಾನತೆಯ ರಥಕ್ಕೆ ಕಳಕಪ್ಪ ನಾಲ್ವಾಡ ಶೆಟ್ಟರು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾನತೆ ಮಂದಿರ ಪ್ರತಿಷ್ಠಾಪನೆಯ ಸಂಚಾಲಕರಾದ ನ್ಯಾಯವಾದಿ ರವಿಕಾಂತ್ ಅಂಗಡಿ ಮಾತನಾಡಿ, ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಎಷ್ಟು ಮುಖ್ಯವೋ ಸಮಾನತೆ ವಿಚಾರಗಳನ್ನು ವಿಶ್ವಕ್ಕೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದ ಸಂವಿಧಾನ ಗ್ರಂಥವೂ ಅಷ್ಟೇ ಮುಖ್ಯವಾಗಿದೆ. ಇಂದಿನ ಹಾಗೂ ಮುಂದಿನ ಪೀಳಿಗೆ ಸಮಾನತೆಯಿಂದ ಸಾಗಲು ನಮ್ಮ ಸಮಾನತೆ ಯಾತ್ರೆಯ ಸಂದೇಶ ಪ್ರೇರಣೆಯಾಗಲಿದೆ ಎಂದರು.

ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆಯ ಮಹಾಸಭಾದ ಸಂಸ್ಥಾಪಕರ, ರಥಯಾತ್ರೆಯ ರೂವಾರಿಗಳಾದ ಅನಿಲ ಮೆಣಸಿನಕಾಯಿ ಮಾತನಾಡಿ, ಸರ್ವರೂ ಸಮಾನತೆ-ಸೌಹಾರ್ದತೆಯಿಂದ ಬಾಳಬೇಕು ಎಂಬ ಸಂಕಲ್ಪ ತೊಟ್ಟು ದೇಶದಲ್ಲಿ ಪ್ರಥಮವಾಗಿ ಸಮಾನತೆ ಮಂದಿರ ಕಟ್ಟುವ ಸಂಕಲ್ಪ ಮಾಡಿದ್ದು, ಸಮಾನತೆ ಮಂದಿರದಲ್ಲಿ ಸಮಾನತೆಯ ಸದ್ಗುರುಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಆ ಸದ್ಗುರುಗಳ ಮೂರ್ತಿಗಳನ್ನು ಪೂಜೆಗೆ ಸೀಮಿತಗೊಳಿಸದೇ, ಸಮಾನತೆ ಮಂದಿರವನ್ನು ಭವಿಷ್ಯತ್ತಿನಲ್ಲಿ ವಿಶ್ವ ಜ್ಞಾನ ಮಂದಿರವನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಗದಗ ಜಿಲ್ಲೆಯಲ್ಲಿ ಸಮಾನತೆಯ ಜ್ಞಾನ ಮಂದಿರ ಕಟ್ಟುವ ಸಂಕಲ್ಪ ನಮ್ಮದಾಗಿದೆ. ಸಮಾನತೆ ರಥಯಾತ್ರೆಯೊಂದಿಗೆ ಸಮಾನತೆ ಬುತ್ತಿಯನ್ನು ಸರ್ವರೂ ಸವಿಯಬೇಕೆಂಬ ಬಯಕೆ ನಮ್ಮದಾಗಿದೆ. ಈ ಪವಿತ್ರ ಕಾರ್ಯದಲ್ಲಿ ತಾವೆಲ್ಲ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಆರ್.ಕೆ. ಕಾಲೋನಿಯ ಯಲ್ಲಪ್ಪ ಬದಾಮಿ, ಸಂತೋಷ್ ನಡಗಡ್ಡಿ, ಶಿವು ಕಟ್ಟಿ, ಮಾರುತಿ ಕರಿ ಸಕ್ರಣ್ಣವರ, ಬಸಪ್ಪ ಗಾಣಿಗೇರ, ಆರ್.ಕೆ. ಕಾಲೋನಿಯ ನಾಗರಿಕರು, ಹಿರಿಯರು ಹಾಗೂ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆಯ ಪ್ರಮುಖರಾದ ಸಿದ್ದಣ್ಣ ಪಲ್ಲೇದ, ವಸಂತ ಪಡಗದ, ಕಾರ್ತಿಕ್ ಶಿಗ್ಲಿಮಠ, ಅಯ್ಯಪ್ಪ ಅಂಗಡಿ, ಬಸವಣ್ಣೆಯ್ಯ ಹಿರೇಮಠ, ಮಂಜುನಾಥ ಮ್ಯಾಗೇರಿ, ಈಶಣ್ಣ ಪಟ್ಟಣಶೆಟ್ಟರ, ಬಾಬು ಎಲಿಗಾರ, ಗೋವಿಂದ ಗುತ್ತಿ ಮುಂತಾದವರು ಉಪಸ್ಥಿತರಿದ್ದರು.

ಗದಗ ಖಾನತೋಟ ಹಾಗೂ ಜನತಾ ಕಾಲೋನಿಗಳಲ್ಲೂ ಸಮಾನತೆಯ ಬುತ್ತಿಗಂಟುಗಳನ್ನು ಒಳಗೊಂಡ ಸಮಾನತೆಯ ರಥಯಾತ್ರೆ ಸಂಚರಿಸಿ ಸಮಾನತೆಯನ್ನು ಸಾರಿತು. ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಸಾರಿದ ಸಮಾನತೆಯ ಮಂತ್ರವನ್ನು ನಾವು ಮುಂದುವರೆಸಿಕೊಂಡು ಹೋಗಬೇಕಿದೆ. ಹಿಂದಿನ ಕಾದಲ್ಲಿ ಸಾಧು-ಸಂತರು ಮಹಾತ್ಮರು ಶತಮಾನಗಳಿಂದ ಸಮಾನತೆ ಬುತ್ತಿಯನ್ನು ಉಣಬಡಿಸುತ್ತಾ ಬಂದರೂ ಸಹ, ಇಂದಿಗೂ ಸಮಾಜದಲ್ಲಿ ಅಸಮಾನತೆಯ ಹೊಗೆ ಆಡುತ್ತಲಿದೆ. ಮುಂದೊಂದು ದಿನ ಜ್ವಾಲೆಯಾಗಿ ಹೊತ್ತುವದು ಖಂಡಿತ. ಆದ್ದರಿಂದ ನಮ್ಮ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆಯ ವತಿಯಿಂದ ಗದಗ ಜಿಲ್ಲೆಯಲ್ಲಿ ಸಮಾನತೆ ಜ್ಞಾನ ಮಂದಿರ ಕಟ್ಟುವ ಸಂಕಲ್ಪ ಮಾಡಿದ್ದೇವೆ ಎಂದರು.

ಮುಖಂಡರಾದ ಹಾಲಪ್ಪ ಗಜಾಕೋಶ ಮಾತನಾಡಿ ಶುಭ ಹಾರೈಸಿದರು.


Spread the love

LEAVE A REPLY

Please enter your comment!
Please enter your name here