ಹಬ್ಬಕ್ಕೂ ಸಿಗದ ಪಡಿತರ

0
Ration not even for the festival
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಸರಕಾರ ಪಡಿತರ ವ್ಯವಸ್ಥೆಯಡಿ ಜಾರಿಗೊಳಿಸಿರುವ ನೂತನ ತಂತ್ರಾಂಶದಲ್ಲಿಯೂ ಕೆಲವು ತಾಂತ್ರಿಕ ಸಮಸ್ಯೆಗಳು ಬಗೆಹರಿಯದೇ ಹೊಸ ಸಮಸ್ಯೆಗಳು ಉದ್ಭವವಾಗುತ್ತಿರುವದರಿಂದ ಶಿರಹಟ್ಟಿಯ ಪಡಿತರ ವಿತರಣೆ ಕೇಂದ್ರದಲ್ಲಿ ಸರ್ವರ್ ಸಮಸ್ಯೆಗೆ ಪಡಿತರ ಚೀಟಿದಾರರು ಸುಸ್ತಾಗುತ್ತಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗಳು ಸಹ ವಿತರಣೆ ಮಾಡುವುದಕ್ಕೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

Advertisement

ಕಳೆದ 10 ದಿನಗಳಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ಕೊನೆಗೆ ಸರ್ವರ್ ಸಮಸ್ಯೆಯಿಂದಾಗಿ ಮನೆಗೆ ಮರಳಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ವರ್‌ನ್ನು ಹಲವು ಇಲಾಖೆಗಳು ಅವಲಂಬಿಸುತ್ತಿದ್ದು, ಮುಖ್ಯವಾಗಿ ಹೊಸ ಕಾರ್ಡ್ ಹಾಗೂ ತಿದ್ದುಪಡಿಗೂ ಸಮಸ್ಯೆಯಾಗಿದೆ. ತಿಂಗಳು ಮುಗಿಯುತ್ತಾ ಬಂದರೂ ಅನ್ನಭಾಗ್ಯದ ಅಕ್ಕಿಗಾಗಿ ನಿತ್ಯದ ಕೆಲಸ ಕಾರ್ಯಗಳನ್ನು ಬದಿಗಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂದೆ ಅಲೆದಾಡುವ ಸ್ಥಿತಿ ಎದುರಾಗಿದೆ.

ಕೂಲಿನಾಲಿ ಮಾಡಿ ಜೀವನ ಸಾಗಿಸುವ ಬಡ ಕುಟುಂಬದ ಸಮಸ್ಯೆಗಳಂತೂ ಹೇಳತೀರದಾಗಿದೆ. ಕೂಲಿ ಕಾರ್ಮಿಕರು ದಿನಕ್ಕೆ ರೂ. 250ರಿಂದ ರೂ. 300 ದುಡಿಯುತ್ತಿದ್ದಾರೆ. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಅಂದಿನ ಕೂಲಿ ಹಣ ದೊರೆಯದೇ ಹೊಟ್ಟಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಮ್ಮ ದೈನದಿಂದಿನ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಸರತಿ ಸಾಲಿನಲ್ಲಿ ಪಡಿತರ ಸಾಮಗ್ರಿಗೆ ನಿಂತರೂ ವಸ್ತುಗಳು ಸಿಗುತ್ತಿಲ್ಲ.

ಶಿರಹಟ್ಟಿ ಪಟ್ಟಣದ ಜನತಾ ಬಜಾರ್ ನ್ಯಾಯಬೆಲೆ ಅಂಗಡಿಯಲ್ಲಿಯೇ ಅಂದಾಜು 1670ಕ್ಕೂ ಹೆಚ್ಚು ಪಡಿತರದಾರರು ಇದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಹೆಚ್ಚು ಅರ್ಹ ಪಡಿತರದಾರರು ಇದ್ದಾರೆ.

ಸಾಲು ಸಾಲು ಹಬ್ಬದ ಇಂತಹ ಸಂದರ್ಭದಲ್ಲಿ ಪಡಿತರ ನೀಡದೇ ಇದ್ದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸಾರ್ವಜನಿಕರಿಗೆ ನಿಗದಿತ ಪಡಿತರ ವಿತರಣೆ ಮಾಡದೇ ಇದ್ದರೆ ನಮಗೂ ಸಮಸ್ಯೆಯಾಗಲಿದೆ. ಇಂತಹ ಕ್ಲಿಷ್ಟಕರ ಸಮಸ್ಯೆಯನ್ನು ಸರ್ಕಾರ ತಕ್ಷಣ ಬಗೆಹರಿಸಬೇಕು ಎಂಬುದು ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳು ಅಭಿಪ್ರಾಯಪಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ ಅನಿಲ ಬಡಿಗೇರ, ಸರ್ವರ್ ಸಮಸ್ಯೆ ರಾಜ್ಯಮಟ್ಟದಲ್ಲಿಯೇ ಇರುವುದರಿಂದ ಪಡಿತರ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪಡಿತರ ಹಂಚಿಕೆ ಮಾಡಲು ಮೌಖಿಕವಾಗಿ ನ್ಯಾಯಬೆಲೆ ಅಂಗಡಿಯವರಿಗೆ ತಿಳಿಸಲಾಗಿದೆ. ಸಮಸ್ಯೆ ಸರಿಪಡಿಸುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here