ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕರ್ನಾಟಕ ರಾಜ್ಯ ಅಗ್ನಿಶಾಮಕ ದಳದ ಡಿಐಜಿಪಿ ರವಿ ಡಿ.ಚನ್ನಣ್ಣವರ ಅವರು ಸೆ. 27ಕ್ಕೆ ನರೇಗಲ್ಲಿಗೆ ಆಗಮಿಸಲಿದ್ದಾರೆ ಎಂದು ಬೀಚಿ ಬಳಗದ ಸಂಚಾಲಕ ಈಶ್ವರ ಬೆಟಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಬೀಚಿ ಬಳಗ ಹಾಗೂ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯವರು ಸಂಯುಕ್ತವಾಗಿ ಏರ್ಪಡಿಸಿರುವ ವಿದ್ಯಾರ್ಥಿ ಪ್ರೇರಣಾ ಶಿಬಿರದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಲಿದ್ದಾರೆ. ನರೇಗಲ್ಲದ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೆ. 27ರ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿರುವ ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅಧ್ಯಕ್ಷರು, ಹಾಲಕೆರೆ ಸಂಸ್ಥಾನಮಠದ ಪೀಠಾಧಿಪತಿಗಳಾಗಿರುವ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಶಿಬಿರವನ್ನು ಮುಖಂಡ, ರೋಣ ಪುರಸಭೆಯ ಮಾಜಿ ಉಪಾಧ್ಯಕ್ಷ ಮಿಥುನ್ ಜಿ.ಪಾಟೀಲ ಉದ್ಘಾಟಿಸಲಿದ್ದಾರೆ. ಎಸ್ಎ ಪಿಯು ಕಾಲೇಜ್, ಅಭಿನವ ಪಿಯು ಕಾಲೇಜ್ ಮತ್ತು ಎಸ್ಎ ಪದವಿ ಕಾಲೇಜಿನ ಸುಮಾರು 2 ಸಾವಿರ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು ಪಡೆಯಲಿದ್ದಾರೆ. ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಅಧ್ಯಕ್ಷತೆ ವಹಿಸಲಿದ್ದು, ಎಸ್ಎವಿವಿಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಕಾಲೇಜು ಆಡಳಿತ ಮಂಡಳಿಗಳ ಅಧ್ಯಕ್ಷರಾದ ಡಾ. ಎಸ್.ಎ. ಪಾಟೀಲ, ಎಂ.ಜಿ. ಸೋಮನಕಟ್ಟಿ ಮತ್ತು ಶಿವಯ್ಯ ಚಕ್ಕಡಿಮಠ ಉಪಸ್ಥಿತರಿರಲಿದ್ದು, ಪ್ರಾಚಾರ್ಯರು, ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿಯವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



