ಜನಸೇವೆಯ ಜನಾನುರಾಗಿ ರವಿ ಗುಂಜೀಕರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನನ್ನ ಮೂರು ದಶಕಗಳ ವೃತ್ತಿ ಜೀವನದಲ್ಲಿ ಅನೇಕ ನಿವೃತ್ತಿ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಆದರೆ, ರವಿ ಗುಂಜೀಕರ ಅವರ ನಿವೃತ್ತಿಯ ಅಂಗವಾಗಿ ನಡೆಯುತ್ತಿರುವ ಆದರ್ಶಮಯ ಕಾರ್ಯಕ್ರಮಗಳನ್ನು ನೋಡಿದರೆ ಈ ನಿವೃತ್ತಿ ಸಮಾರಂಭ ಇತಿಹಾಸದ ಪುಟ ಸೇರಿ ಅನೇಕರಿಗೆ ಮಾದರಿಯಾಗುವುದು ಖಚಿತ ಎಂದು ರವಿ ಗುಂಜೀಕರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಡಿ.ಎಸ್. ತಳವಾರ ನುಡಿದರು.

Advertisement

ಅವರು ಗುರುವಾರ ಇಲ್ಲಿನ ನಗರಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಎಲ್.ಗುಂಜೀಕರ ಅವರ ನಿವೃತ್ತಿ ಅಂಗವಾಗಿ ಜರುಗಿದ ಕಾರ್ಮಿಕರ ದಿನಾಚರಣೆ ಹಾಗೂ 60 ಪೌರಕಾರ್ಮಿಕರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಸಾಮಾನ್ಯ ನೌಕರನಾಗಿ ತಮ್ಮ ವೃತ್ತಿಜೀವನ ಆರಂಭಿಸಿ, ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಪ್ರಮುಖ ಇಲಾಖೆಯ ಜಿಲ್ಲಾಧಿಕಾರಿಯಾಗಿ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನಿವೃತ್ತಿ ಹೊಂದಿರುವ ರವಿ ಅವರ ಸಾಧನೆ ಅನನ್ಯ. ತಮ್ಮ ವೃತ್ತಿ ಜೀವನದುದ್ದಕ್ಕೂ ಆರ್ಥಿಕವಾಗಿ ಹಿಂದುಳಿದ ಜನರು ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಶ್ರೀಯುತರು ಅಧಿಕಾರವನ್ನು ಜನಸೇವೆಗೆ ಉಪಯೋಗಿಸಿದ ಜನಾನುರಾಗಿಗಳು ಎಂದರು.

ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆ ಜಿಲ್ಲಾ ಅಧೀಕ್ಷಕ ಶ್ರೀಧರ ಚಿನಗುಂಡಿ ಮಾತನಾಡಿ, ತಾವು ಕಲಿತ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿರುವ ರವಿ ಗುಂಜೀಕರ ಅವರ ನಡೆ ಅಮೋಘವಾಗಿದ್ದು, ಸರ್ಕಾರಿ ನೌಕರರ ಸಂಘದಲ್ಲಿ ಕೇವಲ ಜಿಲ್ಲಾಮಟ್ಟ ಅಲ್ಲದೇ ರಾಜ್ಯಮಟ್ಟದಲ್ಲೂ ರವಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಪೌರಕಾರ್ಮಿಕರು ತಮ್ಮ ನಿವೃತ್ತಿ ನಂತರ ಪಿಂಚಣಿ ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣ ಮಾಡಿಕೊಳ್ಳದೇ ನಿವೃತ್ತಿಯ 3 ತಿಂಗಳು ಪೂರ್ವದಲ್ಲಿ ನಮ್ಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ಸಾಕು, ನಾವೇ ನಗರಸಭೆಗೆ ಆಗಮಿಸಿ ನಿಮಗೆ ಪಿಂಚಣಿ ಪತ್ರ ನೀಡುತ್ತೇವೆ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಮಾತನಾಡಿ, ರವಿ ಗುಂಜೀಕರ ಅವರು ವ್ಯಕ್ತಿಯಲ್ಲ, ಅದೊಂದು ಶಕ್ತಿ. ನಾನು ಸಾಮಾನ್ಯ ನೌಕರನಾಗಿದ್ದಾಗ ನನ್ನನ್ನು ಗುರುತಿಸಿ ಸಂಘಟನೆ-ಹೋರಾಟದ ಮಹತ್ವಗಳ ಅರಿವು ಮೂಡಿಸಿ ಅನೇಕ ಜವಾಬ್ದಾರಿಗಳನ್ನು ನೀಡಿ ಈಗ ಹಲವರ ಸಹಕಾರದೊಂದಿಗೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ 60 ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರವಿ ಗುಂಜೀಕರ ಅಭಿಮಾನಿ ಬಳಗದ ಅಧ್ಯಕ್ಷ ಅರುಣಕುಮಾರ ಚವ್ಹಾಣ, ಉಪಾಧ್ಯಕ್ಷ ಎಸ್.ಆರ್. ಹಿರೇಮಠ, ಮಹೇಶ ಹಡಪದ, ವೈ.ವಿ. ಬಾಣಾಪೂರ, ಎಸ್.ಬಿ. ಹರಪನಹಳ್ಳಿ, ನಾಗರಾಜ ಬಳ್ಳಾರಿ, ಚಂದ್ರಶೇಖರ ಹಾದಿಮನಿ, ಅರವಿಂದ ಕುರ್ತಕೋಟಿ, ದುರ್ಗಣ್ಣವರ ಸೇರಿದಂತೆ ಪೌರಕಾರ್ಮಿಕರು, ರವಿ ಗುಂಜೀಕರ ಅಭಿಮಾನಿಗಳು-ಆಪ್ತರು ಹಾಜರಿದ್ದರು.

ತಮ್ಮ ನಿವೃತ್ತಿಯ ಅಂಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿದ ರವಿ ಎಲ್.ಗುಂಜೀಕರ ಅವರ ಮಾನವೀಯ ನಡೆ ಹೃದಯಸ್ಪರ್ಶಿಯಾಗಿದೆ. ಪೌರಕಾರ್ಮಿಕರು ಸಹ ಯೋಧರಂತೆ ಸಾರ್ವಜನಿಕರ ರಕ್ಷಣೆ ಮಾಡುತ್ತಿದ್ದು, ಇಂಥ ಗೌರವ-ಸನ್ಮಾನ ಕೊಡಮಾಡಿದ ಗುಂಜೀಕರ ಹಾಗೂ ಅವರ ಅಭಿಮಾನಿ ಬಳಗಕ್ಕೆ ನಾವೆಲ್ಲ ಚಿರಋಣಿಯಾಗಿರುತ್ತೇವೆ

– ಉಮೇಶ ಯಟ್ಟಿ,

ಪೌರಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರವಿ ಗುಂಜೀಕರ ಮಾತನಾಡಿ, ಪೌರಕಾರ್ಮಿಕರು ಸಮಾಜಕ್ಕೆ ನೀಡುತ್ತಿರುವ ಸೇವೆಗೆ ಅವರ ಪಾದಪೂಜೆ ಮಾಡಿದರೂ ಕಡಿಮೆಯೇ. ಇಂಥಹ ಸೇವಾಕರ್ತರಿಗೆ ಸನ್ಮಾನ ಮಾಡುವ ಮೂಲಕ ನನ್ನ ನಿವೃತ್ತಿ ಕಾರ್ಯಕ್ರಮದ ಸಾರ್ಥಕತೆ ಹೆಚ್ಚಾಗಿದೆ. ಪೌರಕಾರ್ಮಿಕರು ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಹೊಂದಿ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕಿದ್ದು, ಈ ವಿಷಯದಲ್ಲಿ ನಾನು ಸಹಾಯ-ಸಹಕಾರ ನೀಡಲು ಸದಾ ಸಿದ್ಧ ಎಂದರು.


Spread the love

LEAVE A REPLY

Please enter your comment!
Please enter your name here