ವಿಜಯಸಾಕ್ಷಿ ಸುದ್ದಿ, ಗದಗ: ಕಳಸಾಪೂರ ರಸ್ತೆಯಲ್ಲಿರುವ ನೂತನ ನಂಜನಗೂಡು ಮಂತ್ರಾಲಯ ರಾಘವೇಂದ್ರ ಸ್ವಾಮಿ ಶಾಖಾ ಮಠದ ಲೋಕಾರ್ಪಣೆ ಮೇ. 30 ಹಾಗೂ 31ರಂದು ಮಂತ್ರಾಲಯ ಮಠದ ಪಿಠಾಧಿಪತಿ 108 ಶ್ರೀ ಸುಭುದೇಂದ್ರ ತೀರ್ಥರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು, ಕಲ್ಪವೃಕ್ಷ, ಭಕ್ತರ ಕೋರಿಕೆಗಳಿಗೆ ಬೃಂದಾವನದಲ್ಲಿ ಕುಳಿತು ಆಶೀರ್ವಾದ ಮಾಡುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠ ಗದಗ ಭಾಗದಲ್ಲಿ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹವನ-ಹೋಮಾದಿಗಳು, ಪ್ರಾಣ ಪ್ರತಿಷ್ಠೆ ಕಾರ್ಯ, ಆಶೀರ್ವಚನ ಸೇರಿದಂತೆ ಅನೇಕ ಧಾರ್ಮಿಕ ಸಭೆಗಳು ನಡೆಯಲಿವೆ. 2016ರಲ್ಲಿ ಪರಮಪೂಜ್ಯ ಶ್ರೀ ಸುಯತೀಂದ್ರ ತೀರ್ಥ ಶ್ರೀಗಳವರಿಂದ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆರ್ಯವೈಶ್ಯ ಸಮಾಜದ ಶ್ರೀನಿವಾಸ್ ಶಿರಹಟ್ಟಿ ಕುಟುಂಬದವರು 9 ಪ್ಲಾಟ್‌ಗಳನ್ನು ಮಠಕ್ಕೆ ದಾನವಾಗಿ ನೀಡಿದ್ದು, ಇದರಲ್ಲಿ 5,600 ಚದರ ಅಡಿ ಜಾಗದಲ್ಲಿ ಸುಂದರ ಮಠದ ಕಟ್ಟಡ ನಿರ್ಮಾಣವಾಗುತ್ತಿದೆ ಎಂದರು.
ಅಂದಾಜು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡಕ್ಕೆ ಮಂತ್ರಾಲಯ ಮಠದಿಂದ 50 ಲಕ್ಷ ರೂಪಾಯಿಗಳನ್ನು ನೀಡಿದ್ದು, ಸಚಿವ ಡಾ. ಎಚ್.ಕೆ. ಪಾಟೀಲ ತಮ್ಮ ಅನುದಾನದಲ್ಲಿ 10 ಲಕ್ಷ ರೂ ನೀಡಿದ್ದಾರೆ. ಜೊತೆಗೆ ಭಕ್ತರ ದಾನದ ಹಣದಿಂದ ಭವ್ಯವಾದ ಮಠ ನಿರ್ಮಾಣವಾಗಿದೆ. ಗರ್ಭಗುಡಿ, ಶ್ರೀಗಳಿಗೆ ವಿಶ್ರಾಂತಿ ವ್ಯವಸ್ಥೆ, ಪ್ರವಚನಕ್ಕೆ ಪ್ರಾಂಗಣ, ಅಡಿಗೆ ಮನೆ, ಉಗ್ರಾಣ, ರಾಯರಿಗೆ ಕಾಷ್ಟ ರಥ ಸೇರಿದಂತೆ ಪೂಜೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಈಗಾಗಲೇ ಭಕ್ತರು ನೀಡಿದ್ದಾರೆ ಅಂತ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ್, ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಸವರಾಜ ಅಸೂಟಿ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಅಶೋಕ ಮಂದಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆರ್ಯವೈಶ್ಯ ಸಮಾಜದ ಹಿರಿಯರಾದ ಪ್ರಹ್ಲಾದ ಹೆಬಸೂರವರಿಂದ ಪ್ರಾರಂಭವಾದ ಮಂತ್ರಾಲಯ ಪಾದಯಾತ್ರೆ ಈಗ 34 ವರ್ಷಗಳನ್ನು ಪೂರೈಸಿದೆ. 35ನೇ ವರ್ಷ ಬರುವ ಮುನ್ನವೇ ಮಂತ್ರಾಲಯದ ಗುರು ಶ್ರೀ ರಾಘವೇಂದ್ರರನ್ನು ಈ ಮಠಕ್ಕೆ ಆಗಮಿಸುವಂತೆ ಮಾಡುತ್ತಿದ್ದಾರೆ. ಆರ್ಯವೈಶ್ಯ ಸಮಾಜದ ಭಕ್ತರು ಹಾಗೂ ಮಂತ್ರಾಲಯ ಪಾದಯಾತ್ರಿಕರು ಅಭಿನಂದನಾರ್ಹರು ಎಂದು ಡಿ.ಆರ್. ಪಾಟೀಲ ಹೆಮ್ಮೆಯಿಂದ ಹೇಳಿದರು.



