ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ, ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ನೀಡಿದೆ. ತಂಡಕ್ಕೆ ಯಾವ್ಯಾವ ಆಟಗಾರರು ಬರಬೇಕೆಂದು ಅಭಿಮಾನಿಗಳು ಬಯಸಿದ್ದರೋ, ಆ ಯಾವ ಆಟಗಾರರನ್ನು ಆರ್‌ಸಿಬಿ ಖರೀದಿಸಿಲ್ಲ.
ಈ ಮೂಲಕ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಒಳ ಒಪ್ಪಂದ ಆಗಿತ್ತಾ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಪ್ರಾಂಚೈಸಿ ನಿರ್ಧಾರಕ್ಕೆ RCB ಅಭಿಮಾನಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಟಾರ್ ಆಲ್ರೌಂಡರ್ ವಿಲ್ ಜಾಕ್ಸ್ ಮಿಂಚಿದ್ರು. ಆರ್‌ಸಿಬಿ ತಂಡ ಪ್ಲೇ ಆಫ್ಗೆ ಹೋಗಲು ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಮೆಗಾ ಹರಾಜಿಗೆ ಮುನ್ನ ಆರ್‌ಸಿಬಿ ಇವರನ್ನು ತಂಡದಿಂದ ರಿಲೀಸ್ ಮಾಡಿತ್ತು. ಮೆಗಾ ಹರಾಜಿನಲ್ಲಿ ಆರ್ಟಿಎಂ ಕಾರ್ಡ್ ಬಳಸಬಹುದು ಎಂದು ಹೇಳಲಾಗಿತ್ತು. ಆದರೆ, ಆರ್‌ಸಿಬಿ ಫ್ಯಾನ್ಸ್ ಕನಸಿಗೆ ತಣ್ಣೀರೆರಚಿದ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ಗೆ ವಿಲ್ ಜಾಕ್ಸ್ ಅವರನ್ನು ಆರ್ಟಿಎಂ ಕಾರ್ಡ್ ಬಳಸದೆ ಬಿಟ್ಟುಕೊಟ್ಟಿದೆ.
ಇನ್ನು ವಿಲ್ ಜ್ಯಾಕ್ಸ್ ಖರೀದಿ ಮಾಡುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಎದ್ದು ಹೋಗಿ ಆರ್‌ಸಿಬಿ ತಂಡದ ಅಧ್ಯಕ್ಷ ಪ್ರಥಮೇಶ್ ಮಿಶ್ರಾರ ಕೈ ಕುಲುಕಿ ಧನ್ಯವಾದ ಹೇಳಿದ್ರು. ಇದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಮಾಲಿಕರ ನಡುವೆ ಒಳ ಒಪ್ಪಂದ ಆಗಿದೆಯೇ ಎನ್ನುವ ಅನುಮಾನ ಮೂಡಿದೆ.