ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ಹಿನ್ನೆಲೆ, ಅಭಿಮಾನಿಗಳ ಅನುಕೂಲಕ್ಕಾಗಿ ಆಯೋಜಕರು ಹಾಗೂ ಬೆಂಗಳೂರು ಪೊಲೀಸರು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಈಗಾಗಲೇ ಬಿಎಂಆರ್ಸಿಎಲ್ ಮೆಟ್ರೋ ರೈಲುಗಳ ಸಮಯ ವಿಸ್ತರಣೆ ಮಾಡಿರುವ ನಡುವೆ, ಜನಸಂದಣಿ ನಿಯಂತ್ರಣಕ್ಕಾಗಿ ಬಿಎಂಟಿಸಿ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 8 ಬಸ್ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ.
ಈ ಬಸ್ಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣ (HAL ರಸ್ತೆ), ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಮಾಗಡಿ ರಸ್ತೆಯ ಜನಪ್ರಿಯ ಟೌನ್ಶಿಪ್, ಆರ್.ಕೆ. ಹೆಗಡೆ ನಗರ (ಯಲಹಂಕ), ಹೊಸಕೋಟೆ ಹಾಗೂ ಬನಶಂಕರಿ ಕಡೆಗಳಿಗೆ ಸಂಚರಿಸಲಿವೆ. ವಿಶೇಷ ಬಸ್ಗಳು ಸಿ.ಟಿ.ಒ ಜಂಕ್ಷನ್ನಿಂದ ಬಿ.ಆರ್.ವಿ ಜಂಕ್ಷನ್ವರೆಗೆ ರಸ್ತೆಯ ಎಡಭಾಗದಲ್ಲಿ ನಿಲುಗಡೆಯಾಗಲಿವೆ.
ಇದರ ಜೊತೆಗೆ, ಭದ್ರತಾ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಕೆಲವು ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭಿಮಾನಿಗಳು ಸುರಕ್ಷತಾ ಸಿಬ್ಬಂದಿಯೊಂದಿಗೆ ಸಹಕರಿಸಿ, ನಿರ್ಬಂಧಿತ ವಸ್ತುಗಳನ್ನು ತರದಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಂಶಯಾಸ್ಪದ ವಸ್ತುಗಳು ಕಂಡುಬಂದಲ್ಲಿ ಅವನ್ನು ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.



