ಬೆಂಗಳೂರು: ಆರ್‌ಸಿಬಿ ಕಾಲ್ತುಳಿತ ದುರಂತದಿಂದ ಎಚ್ಚೆತ್ತು, ಈ ಬಾರಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಪೊಲೀಸ್ ಮತ್ತು ತೋಟಗಾರಿಕೆ ಇಲಾಖೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.
ಗಣರಾಜ್ಯೋತ್ಸವ ಪ್ರಯುಕ್ತ 219ನೇ ಫಲಪುಷ್ಪ ಪ್ರದರ್ಶನ ಇಂದಿನಿಂದ ಜನವರಿ 26ರವರೆಗೆ ನಡೆಯಲಿದ್ದು, ಸುಮಾರು 12 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಸಾಧ್ಯತೆ ಇದೆ. ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಜನಸಂದಣಿ ಹೆಚ್ಚುವ ನಿರೀಕ್ಷೆ ಹಿನ್ನೆಲೆ ಎಂಟ್ರಿ–ಎಕ್ಸಿಟ್ ವ್ಯವಸ್ಥೆಗೆ ವಿಶೇಷ ಗಮನ ನೀಡಲಾಗಿದೆ.
ಪ್ರಮುಖ ಆಕರ್ಷಣೆಯಾದ ಗಾಜಿನ ಮನೆ ಸುತ್ತಮುತ್ತ ಈ ಬಾರಿ ‘ನೋ ಮ್ಯಾನ್ ಝೋನ್’ ಘೋಷಿಸಲಾಗಿದ್ದು, ಜನರು ನಿಲ್ಲದೇ ಸಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಒಂದೇ ಕಡೆ ಜನಸಂದಣಿ ಹೆಚ್ಚಾಗಿ ಸಮಸ್ಯೆ ಉಂಟಾಗದಂತೆ ತಡೆಯಲು ಉದ್ದೇಶಿಸಲಾಗಿದೆ. ಲಾಲ್‌ಬಾಗ್ ಆವರಣದಲ್ಲಿ 135ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಜನರನ್ನು ಬೇರೆಡೆಗಳಿಗೆ ಡೈವರ್ಟ್ ಮಾಡುವ ವ್ಯವಸ್ಥೆಯೂ ಮಾಡಲಾಗಿದೆ.
ಈ ಬಾರಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಬದುಕು–ಬರಹ ಆಧಾರಿತ ಪುಷ್ಪವಿನ್ಯಾಸ ಪ್ರಮುಖ ಆಕರ್ಷಣೆಯಾಗಿದ್ದು, 12 ದಿನಗಳ ಕಾಲ ಪ್ರವಾಸಿಗರನ್ನು ಮನಸೂರೆಗೊಳ್ಳಲಿದೆ.



