ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ ಮತ್ತು ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸಿತು.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ಲಿಯಾಮ್ ಲಿವಿಂಗ್ಸ್ಟೋನ್ ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ ಎಂಟು ವಿಕೆಟ್ಗಳ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ 17.5 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ಅವರಂತಹ ಬೌಲರ್ಗಳು ಕೂಡ ಸಿರಾಜ್ ದಾಳಿಯ ಲಾಭ ಪಡೆದರು. ಆದಾಗ್ಯೂ ಸ್ಫೋಟಕ ಬ್ಯಾಟ್ಸ್ಮನ್ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಜಿತೇಶ್ ಶರ್ಮಾ ಉತ್ತಮ ಜೊತೆಯಾಟ ಆಡಿದರು. ಆದಾಗ್ಯೂ,
ಈ ಸಮಯದಲ್ಲಿ ಗುಜರಾತ್ ಲಿವಿಂಗ್ಸ್ಟೋನ್ಗೆ 3 ಅವಕಾಶಗಳನ್ನು ನೀಡಿತು. ಇದರ ಲಾಭ ಪಡೆದ ಲಿವಿಂಗ್ಸ್ಟೋನ್ 54 ರನ್ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ, ಟಿಮ್ ಡೇವಿಡ್ ಕೇವಲ 18 ಎಸೆತಗಳಲ್ಲಿ 32 ರನ್ ಗಳಿಸಿ ಬೆಂಗಳೂರು ತಂಡವನ್ನು 169 ರನ್ಗಳ ಪಂದ್ಯಕ್ಕೆ ಅರ್ಹವಾದ ಸ್ಕೋರ್ಗೆ ಕೊಂಡೊಯ್ದರು.
ಕಳೆದ ಎರಡು ಪಂದ್ಯಗಳಲ್ಲಿ ಪವರ್ಪ್ಲೇನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಆರ್ಸಿಬಿ ಬೌಲರ್ಗಳು ಈ ಬಾರಿ ಅದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್ವುಡ್ ಹೆಚ್ಚು ರನ್ ಬಿಟ್ಟುಕೊಡದಿದ್ದರೂ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಜೋಡಿ ಉತ್ತಮ ಜೊತೆಯಾಟ ಆಡಿತು. ಆದಾಗ್ಯೂ ಭುವನೇಶ್ವರ್, ಗಿಲ್ರನ್ನು ಬೇಗನೇ ಪೆವಿಲಿಯನ್ಗಟ್ಟಿದರು. ಆದರೆ ಇದರ ನಂತರ, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಇನ್ನಿಂಗ್ಸ್ ನಿಭಾಯಿಸಿ, ಆರ್ಸಿಬಿ ಮತ್ತೆ ಪಂದ್ಯಕ್ಕೆ ಮರಳದಂತೆ ಮಾಡಿದರು.
ಸಾಯಿ ಸುದರ್ಶನ್ 49 ರನ್ಗಳಿಗೆ ಔಟಾದರಾದರೂ ಪಂದ್ಯದ ಫಲಿತಾಂಶ ಬಹುತೇಕ ನಿರ್ಧಾರವಾಗಿದ್ದರಿಂದ ಇದು ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬಟ್ಲರ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರೆ, ಅವರಿಗೆ ಶರ್ಫನ್ ರುದರ್ಫೋರ್ಡ್ ಉತ್ತಮ ಸಾಥ್ ನೀಡಿದರು.
ಈ ಇಬ್ಬರು 63 ರನ್ಗಳ ಅಜೇಯ ಪಾಲುದಾರಿಕೆಯನ್ನು ಮಾಡಿದರು. ಈ ಮೂಲಕ 17.5 ಓವರ್ಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ವೇಳೆ ಬಟ್ಲರ್ ಕೇವಲ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ಗಳ ನೆರವಿನಿಂದ ಅಜೇಯ 73 ರನ್ ಗಳಿಸಿದರೆ, ರುದರ್ಫೋರ್ಡ್ 18 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗುಳಿದರು.