ಬೆಂಗಳೂರು:- ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಒಂದು. ಈ ತಂಡದ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಅದರಲ್ಲೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದರೆ ಫ್ಯಾನ್ಸ್ ಗೆ ಹಬ್ಬ. ಪಂದ್ಯದ ಟಿಕೆಟ್ ಗೆ ಮುಗಿಬೀಳುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ದುಪ್ಪಟ್ಟು ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ.
ಅದರಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಆರ್ಸಿಬಿ ಹಾಗೂ ದೆಹಲಿ ನಡುವಿನ ಪಂದ್ಯದ ಟಿಕೆಟ್ಗಳನ್ನ ದುಪ್ಪಟ್ಟು ಬೆಲೆಗೆ ಬ್ಲಾಕ್ನಲ್ಲಿ ಮಾರಾಟ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತಮುತ್ತ, ಕಬ್ಬನ್ ಪಾರ್ಕ್ ಒಳಗೆ ಟಿಕೆಟ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಡಿಸಿಪಿ ಅಕಾಯ್ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ.
ಮಫ್ತಿಯಲ್ಲಿ ಟಿಕೆಟ್ ಖರೀದಿಸುವ ನೆಪದಲ್ಲಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಒಪ್ಪಿಸಿದರು. ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.